ಅತಿಯಾದ ಸ್ವಾತಂತ್ರದಿಂದ ವಿಚ್ಛೇಧನಾ ಪ್ರಕರಣಗಳು ಹೆಚ್ಚಳ: ಶ್ಯಾಮಲಾ ಕುಂದರ್

ಉಡುಪಿ, ಮಾ. 9: ಮಹಿಳೆಯರಿಗೆ ಸಂಬಂಧಿಸಿ ಅನೇಕ ಪ್ರಕರಣಗಳು ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಬರುತ್ತಿವೆ. ನಮ್ಮ ಮಕ್ಕಳಿಗೆ ಅತಿಯಾದ ಸ್ವಾತಂತ್ರ ನೀಡಿದ ಪರಿಣಾಮ ವಿಚ್ಛೇಧನಾ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇದನ್ನು ತಡೆಯುವಲ್ಲಿ ತಾಯಂದಿರ ಪಾತ್ರ ಅತಿಮುಖ್ಯ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದ್ದಾರೆ.
ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಉಡುಪಿ ಬಂಟರ ಸಂಘದ ಸಹಯೋಗದಲ್ಲಿ ಸೋಮವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಒಂದೇ ಮನೆಯಲ್ಲಿದ್ದರೂ ಮೊಬೈಲ್ ಮೂಲಕವೇ ಸಂಪರ್ಕ ಮಾಡುವ ಸ್ಥಿತಿ ನಮ್ಮಲ್ಲಿ ಬಂದಿದೆ. ಇದೇ ರೀತಿಯಾದರೆ ನಮ್ಮ ನಡುವಿನ ಸಂಬಂಧವೇ ದೂರ ಆಗಲಿದೆ. ಈ ನಿಟ್ಟಿನಲ್ಲಿ ಮಾನವೀಯ ಸಂಬಂಧಗಳನ್ನು ಉಳಿಸುವ ಕಾರ್ಯವನ್ನು ಅಗತ್ಯವಾಗಿ ಮಾಡಬೇಕಾಗಿದೆ ಎಂದರು.
ಉಡುಪಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಸ್ವಾತಂತ್ರ ಇಲ್ಲವಾಗಿದೆ. ಬಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಕರಾಟೆಯಂತ ಕಲೆಗಳನ್ನು ಕಲಿಯುವ ಮೂಲಕ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಮ್ಮ ಮಾತೃಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡ ಲಾಗುತ್ತಿದೆ. ಭಾರತೀಯರು ಪ್ರಕೃತಿಯಲ್ಲಿ ಮಾತೆಯರನ್ನು ಕಂಡು ಪೂಜೆಸುವ ಸಂಸ್ಕೃತಿ ಹೊಂದವರಾಗಿದ್ದಾರೆ. ಮಹಿಳೆ ಇಂದು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಚಾಪು ಮೂಡಿಸುತ್ತಿದ್ದಾಳೆ ಎಂದು ಅವರು ತಿಳಿಸಿದರು.
ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮಾತನಾಡಿದರು. ಉಡುಪಿ ತಾಲೂಕು ಶಿಶು ಕಲ್ಯಾಣಾಧಿಕಾರಿ ವೀಣಾ, ಬಂಟರ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ, ಮಹಿಳಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸರಳಾ ಕಾಂಚನ್ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹಾಗೂ ಪವರ್ ಲಿಫ್ಟರ್ ಪ್ರತೀಕ್ಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷ ರಾಧಾದಾಸ್, ಉಡುಪಿ ತಾಲೂಕು ಉಪಾಧ್ಯಕ್ಷರಾದ ಸುಷ್ಮಾ ಎಸ್.ಶೆಟ್ಟಿ, ಸುಪ್ರಭ ಆಚಾರ್ಯ, ಕೋಶಾ ಧಿಕಾರಿ ಮಮತ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ಗೀತಾ ರವಿ ಉಪಸ್ಥಿತ ರಿದ್ದರು. ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ಸ್ವಾಗತಿಸಿದರು. ಇದಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







