ಮಹಿಳಾ ದಿನಾಚರಣೆ; ಜನಜಾಗೃತಿ ಕಾರ್ಯಕ್ರಮ

ಉಡುಪಿ, ಮಾ.9: ಮಾಹೆಯ ಮಣಿಪಾಲ ಕಾಲೇಜ್ ಆಪ್ ನರ್ಸಿಂಗ್ ವತಿಯಿಂದ ಸಂಪಿಗೆ ನಗರದ ಅಂಗನವಾಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಎಂಸಿಯ ಸಮುದಾಯ ಆರೋಗ್ಯ ಶುಶ್ರೂಷಕ ವಿಭಾಗದ ಮುಖ್ಯಸ್ಥ ಡಾ. ಶಶಿಧರ ವೈ.ಎನ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಧ್ಯೇಯ ಸಮಾನತೆ ಬಗ್ಗೆ ಮಾತನಾಡಿ, ಲಿಂಗ ಬೇಧಬಾವ, ತಾರತಮ್ಯದ ನಿರ್ಮೂಲನೆಯನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಿಂದಲೇ ಆರಂಭಿಸಿದಾಗ ಸಮಾನತೆಯನ್ನು ಕಾಣಬಹುದು ಎಂದರು.
ಮಣಿಪಾಲ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ನೇತ್ರ, ಮಹಿಳೆ ಯರಲ್ಲಿ ಸಮಾನತೆ, ಸುರಕ್ಷತೆ ಹಾಗೂ ದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಮಾತನಾಡಿ, ಮಹಿಳೆಯರು ಮರ್ಯಾದೆಗೆ ಅಂಜಿ ದೌರ್ಜನ್ಯವನ್ನು ಸಹಿಸಬಾರದು. ದೇಶದ ಕಾನೂನು ಮಹಿಳೆಯ ಸುರಕ್ಷತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಟಾನಗೊಂಡಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಯಿಂದ ಸಾರ್ವಜನಿಕರು ಠಾಣೆಯ ಮೆಟ್ಟಿಲೇರಲು ಹಿಂಜರಿಯಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಾವರ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರತಾಪ್ ಕುಮಾರ್, ಅಂಗನವಾಡಿ ಶಿಕ್ಷಕಿ ನಮೃತಾ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಮಣಿಪಾಲ ಕಾಲೇಜ್ ಆಪ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕಿ ಮಂಜುಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







