ಮಾ.10: ಸಾಕ್ಷಿಗಳ ಮುಂದೆ ಶಂಕಿತ ಉಗ್ರ ಆದಿತ್ಯರಾವ್ನ ಪರೇಡ್
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಪತ್ತೆ ಪ್ರಕರಣ

ಆದಿತ್ಯರಾವ್
ಮಂಗಳೂರು, ಮಾ.9: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಉಗ್ರ ಆದಿತ್ಯ ರಾವ್ನನ್ನು ಮಾ.10ರಂದು ಬೆಳಗ್ಗೆ 10:30ಕ್ಕೆ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಪರೇಡ್ ನಡೆಸಲಾಗುವುದು ಎಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಸುಮಾರು 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿ ಕೊಂಡಿತ್ತು. ಆ ಪೈಕಿ ಆರೋಪಿಯು ಸ್ಫೋಟಕ ಇರಿಸಿ, ಪರಾರಿಯಾದ ದಿನ ಆತನನ್ನು ಪ್ರತ್ಯಕ್ಷವಾಗಿ ಕಂಡಿದ್ದ 15 ಮಂದಿಯ ಮುಂದೆ ಮಂಗಳವಾರ ಪರೇಡ್ ನಡೆಯಲಿದೆ. ಗುರುತು ಪತ್ತೆಗಾಗಿ ಪರೇಡ್ ನಡೆಸಲು ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿ ಬೆಳ್ಳಿಯಪ್ಪ ಮಂಗಳೂರು ತಹಶೀಲ್ದಾರ್ಗೆ ಈಗಾಗಲೆ ಪತ್ರ ಬರೆದಿದ್ದಾರೆ.
ಎರಡು ವಾರದ ಹಿಂದೆಯೇ ಆರೋಪಿಯ ಪರೇಡ್ ನಡೆಸಲು ಪೊಲೀಸರು ಎಲ್ಲಾ ಸಿದ್ಧತೆ ನಡೆಸಿದ್ದರು. ಆದರೆ ಆದಿತ್ಯರಾವ್ನ ಆರೋಗ್ಯ ಹದಗೆಟ್ಟ ಕಾರಣ ಪರೇಡ್ ಕಾರ್ಯ ಮುಂಡೂಡಲ್ಪಟ್ಟಿತ್ತು. ನಗರದ ಕಾರಾಗೃಹದಲ್ಲಿದ್ದ ಆದಿತ್ಯರಾವ್ನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಹಾಗಾಗಿ ಪರೇಡ್ ಕಾರ್ಯಕ್ಕೆ ಎಲ್ಲಾ ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





