ಅಪಘಾತದಲ್ಲಿ ಸಹ ಸವಾರ ಮೃತ್ಯು: ಕಾರು ಚಾಲಕನಿಗೆ ಶಿಕ್ಷೆ
ಮಂಗಳೂರು, ಮಾ.9: ನಗರದ ಪಡೀಲ್ ಸಮೀಪದ ಕೊಡಕ್ಕಲ್‌ನಲ್ಲಿ ಬೈಕ್ ಮತ್ತು ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಯುವಕ ನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಫ್ ಸಿ 3ನೇ ನ್ಯಾಯಾಲಯವು ಆರೋಪಿ ಕಾರು ಚಾಲಕನಿಗೆ 6 ತಿಂಗಳು ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬಿಜು ಎಸ್. ಪಿಲ್ಲಯಿ (30) ಶಿಕ್ಷೆಗೊಳಗಾದ ಅಪರಾಧಿ. ಬಿ.ಸಿ. ರೋಡು ಜೋಡುಮಾರ್ಗ ನಿವಾಸಿ ಜೀವನ್ ಆಚಾರ್ಯ (31) ಮೃತಪಟ್ಟವರು.
ಪ್ರಕರಣ ವಿವರ: 2015ರ ಡಿ.27ರಂದು ಮಧ್ಯಾಹ್ನ 1:30ರ ವೇಳೆಗೆ ವಾಚ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ಜೀವನ್ ಆಚಾರ್ಯ (31) ತನ್ನ ಸಹೋದ್ಯೋಗಿ ಗಣೇಶ್ ಎಂಬವರ ಬೈಕ್‌ನಲ್ಲಿ ಊಟಕ್ಕಾಗಿ ಮಂಗಳೂರು ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಬೆಂಗಳೂರಿನಿಂದ ಬಿಜು ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೈಕ್‌ಗೆ ಢಿಕ್ಕಿಯಾಗಿತ್ತು. ಇದರಿಂದ ಸಹ ಸವಾರ ಜೀವನ್ ಆಚಾರ್ಯ ಗಂಭೀರ ಗಾಯಗೊಂಡರೆ, ಸವಾರ ಗಣೇಶ್‌ಗೆ ತರಚಿದ ಗಾಯವಾಗಿತ್ತು. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜೀವನ್ ಆಚಾರ್ಯ 2016ರ ಜ.4ರಂದು ಮೃತಪಟ್ಟಿದ್ದರು. ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುರೇಶ್ ಕುಮಾರ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಜೆಎಂಎಫ್ ಸಿ 3ನೇ ನ್ಯಾಯಾಲಯದ ನ್ಯಾಯಾಧೀಶ ಅಶ್ವಿನಿ ಕೋರೆ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಅದರಂತೆ ಐಪಿಸಿ 279ರಂತೆ 1ಸಾವಿರ ರೂ. ದಂಡ ಮತ್ತು 45 ದಿನಗಳ ಸಾದಾ ಶಿಕ್ಷೆ, ಐಪಿಸಿ 337ರಂತೆ 500 ರೂ. ದಂಡ, 45 ದಿನಗಳ ಸಾದಾ ಸಜೆ, ಐಪಿಸಿ 304 (ಎ) ನಿರ್ಲಕ್ಷ್ಯದ ಚಾಲನೆಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದರು.







