ಯೆಸ್ ಬ್ಯಾಂಕ್ ಹಿಂದೆಗೆತ ಮಿತಿ ವಾರದೊಳಗೆ ರದ್ದಾಗುವ ಸಾಧ್ಯತೆ: ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಹೊಸದಿಲ್ಲಿ,ಮಾ.9: ಯೆಸ್ ಬ್ಯಾಂಕ್ ಮೇಲಿನ ಸ್ತಂಭನವು ಒಂದು ವಾರದೊಳಗೆ ಅಂತ್ಯಗೊಳ್ಳಬಹುದು ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ ಅವರು ಸೋಮವಾರ ತಿಳಿಸಿದರು.
ಆಂಗ್ಲ ಸುದ್ದಿವಾಹಿನಿಯೊಂದಿಗೆ ಸಂವಾದದಲ್ಲಿ ಕುಮಾರ್,‘ನಾವು (ಎಸ್‌ಬಿಐ) ಮಧ್ಯಪ್ರವೇಶ ಮಾಡಿದ ಬಳಿಕ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಹಣದ ಬಗ್ಗೆ ಚಿಂತಿಸಬೇಕಿಲ್ಲ ಎಂದು ಅವರಿಗೆ ಭರವಸೆ ನೀಡುತ್ತೇನೆ. ಹಣಕಾಸು ವ್ಯವಸ್ಥೆಯು ಸದೃಢವಾಗಿದೆ ’ಎಂದು ಹೇಳಿದರು.
ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಆರ್‌ಬಿಐ ಅದನ್ನು ಉಳಿಸಲು ಯೋಜನೆಯೊಂದನ್ನು ಈಗಾಗಲೇ ಪ್ರಕಟಿಸಿದ್ದು,ಅದರಡಿ ಎಸ್‌ಬಿಐ ಯೆಸ್‌ನಲ್ಲಿ 10,000 ಕೋ.ರೂ.ಗಳ ಹೂಡಿಕೆಯನ್ನು ಮಾಡಲಿದೆ.
ಯೆಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವಂತೆ ಎಸ್‌ಬಿಐಗೆ ಸರಕಾರವು ಯಾವುದೇ ನಿರ್ದೇಶವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರ್,ಎಸ್‌ಬಿಐ,ಆರ್‌ಬಿಐ ಮತ್ತು ಸರಕಾರ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳುವಂತಿಲ್ಲ. ಇವು ಮೂರೂ ಸಂಘಟಿತ ಪ್ರಯತ್ನದ ಭಾಗವಾಗಿವೆ ಎಂದರು.
ಎಸ್‌ಬಿಐ ಆರ್‌ಬಿಐ ಜೊತೆ ನಿಕಟವಾಗಿ ಕಾರ್ಯಾಚರಿಸುತ್ತಿದೆ. ಯೆಸ್ ಬ್ಯಾಂಕ್‌ನ ಬಂಡವಾಳೀಕರಣ 20,000 ಕೋ.ರೂ-22,000 ಕೋ.ರೂ.ಮೊತ್ತದ್ದಾಗಲಿದ್ದು,ಹಲವಾರು ಸಹಹೂಡಿಕೆದಾರರು ಕೈಜೋಡಿಸಲು ಸಿದ್ಧರಿದ್ದಾರೆ ಎಂದ ಅವರು,ಯೆಸ್ ಬ್ಯಾಂಕಿನ ಉಳಿವು ಹಣಕಾಸು ವ್ಯವಸ್ಥೆಗೆ ನಿರ್ಣಾಯಕವಾಗಿದೆ. ಯೆಸ್ ಬ್ಯಾಂಕಿನ ನಿಯಂತ್ರಕ ಬಂಡವಾಳ ಅನುಪಾತದ ಅಗತ್ಯವನ್ನು ಪೂರೈಸುವುದು ಮರುಬಂಡವಾಳೀಕರಣದ ಉದ್ದೇಶವಾಗಿದೆ ಎಂದರು. ಬ್ಯಾಂಕುಗಳು ತಮ್ಮ ಆಯವ್ಯಯ ಪತ್ರಗಳಲ್ಲಿಯ ಎಲ್ಲ ವಿವರಗಳನ್ನು ಬಹಿರಂಗಗೊಳಿಸಬೇಕು ಎಂದು ಹೇಳಿದ ಅವರು,ಯೆಸ್ ಬ್ಯಾಂಕ್ ನರಳುವಂತಾಗಬಾರದು ಮತ್ತು ಅದರ ಪ್ರವರ್ತಕರ ವಿರುದ್ಧ ಕ್ರಮಗಳನ್ನು ಜರುಗಿಸಬೇಕು ಎಂದರು. ಎಸ್‌ಬಿಐ ಯೆಸ್ ಬ್ಯಾಂಕಿನಲ್ಲಿ ಸಹ ಹೂಡಿಕೆದಾರನಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.







