ಯುಕೆಪಿ ಯೋಜನೆ ಮುಂದೂಡಿದರೆ ಎಂತಹ ನಾವು ತ್ಯಾಗಕ್ಕೂ ಸಿದ್ಧ: ಎಸ್.ಆರ್.ಪಾಟೀಲ್ ಕಿಡಿ

ಬೆಂಗಳೂರು, ಮಾ.9: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ನೆಪದಲ್ಲಿ ಯೋಜನೆ ಮುಂದೂಡಿದರೆ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ ಎಂದು ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಗುಡುಗಿದ್ದಾರೆ.
ಸೋಮವಾರ ಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಮೂರನೇ ಹಂತದ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಪ್ರದೇಶದ ಸುಮಾರು 7 ಪ್ರಮುಖ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಆದುದರಿಂದ ರಾಷ್ಟ್ರೀಯ ಯೋಜನೆ ನೆಪವನ್ನಿಟ್ಟಿಕೊಂಡು ಯೋಜನೆ ಮುಂದೂಡಬಾರದು. ಒಂದು ವೇಳೆ ಮುಂದೂಡಿದರೆ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ ಎಂದರು.
ಶೇ.10 ರಷ್ಟು ಮೀಸಲಿಡಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆ ಪೂರ್ತಿಗೊಳಿಸುವ ಸಲುವಾಗಿ ಬಜೆಟ್‌ನ ಶೇ.10 ರಷ್ಟು ಮೀಸಲಿಡಬೇಕು. ಕೆಯುಪಿ ಮೂರನೇ ಹಂತದ ಯೋಜನೆಗೆ ಅಂದಾಜು 75 ಸಾವಿರ ಕೋಟಿ ಅನುದಾನದ ಅಗತ್ಯವಿದೆ. ಹೀಗಾಗಿ, ರಾಜ್ಯ ಸರಕಾರದ ಬಜೆಟ್‌ನಲ್ಲಿ ಶೇ.10 ಮೀಸಲಿಟ್ಟರೆ, ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ತಿಯಾಗುತ್ತದೆ ಎಂದು ವಿವರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಕೆಲಸ ಮಾಡಲು ಸರಿಯಾದ ಅಧಿಕಾರಿಗಳೇ ಇಲ್ಲ. ಇಲ್ಲಿ ಒಟ್ಟು 855 ಹುದ್ದೆಗಳಿದ್ದು, ಅದರಲ್ಲಿ 460 ಸ್ಥಾನಗಳು ಖಾಲಿಯಿವೆ. ಹೀಗಿದ್ದರೆ ಯೋಜನೆ ಹೇಗೆ ಪೂರ್ತಿಯಾಗುತ್ತದೆ. ಹೀಗಾಗಿ, ಶೀಘ್ರದಲ್ಲಿಯೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಕೆಲಸ ಮಾಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
-ಎಸ್.ಆರ್.ಪಾಟೀಲ್, ವಿಪಕ್ಷ ನಾಯಕ







