ನಕಲಿ ಜಾತಿ ದೃಢೀಕರಣ ಪತ್ರ: ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿ
ಡಿಸಿಎಂ ಕಾರಜೋಳ

ಬೆಂಗಳೂರು, ಮಾ. 9: ನಕಲಿ ಜಾತಿ ದೃಢೀಕರಣ ಪತ್ರ ವಿತರಣೆ ಸಂಬಂಧ ತಪ್ಪಿತಸ್ಥ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆ ಇತರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಎಸ್ಪಿ ಸದಸ್ಯ ಎನ್. ಮಹೇಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಕಲಿ ಜಾತಿ ದೃಢೀಕರಣ ಪತ್ರ ನೀಡುವ ತಹಶೀಲ್ದಾರರ ವಿರುದ್ಧ ಸಮಾಜ ಕಲ್ಯಾಣ ಇಲಾಖೆಗೆ ಶಿಫಾರಸ್ಸು ಮಾಡುವ ಅಧಿಕಾರವಷ್ಟೇ ಇದೆ. ಕ್ರಮ ಕೈಗೊಳ್ಳುವ ಅಧಿಕಾರ ಕಂದಾಯ ಇಲಾಖೆಗೆ ಇದೆ. ಹೀಗಾಗಿ ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸುವ ಕೆಲಸ ಆಗುತ್ತಿದೆ ಎಂದರು.
ರಾಜ್ಯದಲ್ಲಿ 973 ನಕಲಿ ಜಾತಿ ದೃಢೀಕರಣ ಪತ್ರ ಪಡೆದಿರುವ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 610 ಪ್ರಕರಣಗಳು ಇತ್ಯರ್ಥವಾಗಿದ್ದು, 12 ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. 140 ಪ್ರಕರಣಗಳು ಪರಿಶೀಲನೆ ನಡೆಸದೆ ನಿರ್ಲಕ್ಷದಿಂದ ಸುಳ್ಳು ಜಾತಿ ದೃಢೀಕರಣ ಪತ್ರ ವಿತರಿಸಿರುವ ತಹಶೀಲ್ದಾರ್‌ಗಳ ಮೇಲೆ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಮತ್ತು ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ, ನಕಲಿ ಜಾತಿ ದೃಢೀಕರಣ ಪತ್ರ ಕೊಡುವುದು ಮತ್ತು ಪಡೆಯುವುದು ಅಪರಾಧ. ಹೀಗಿರುವಾಗ ಕೇವಲ ಶಿಫಾರಸು ಮಾಡುವುದು ಸಲ್ಲ. ಶಿಕ್ಷೆ ನೀಡುವ ಅಧಿಕಾರವನ್ನು ಇಲಾಖೆ ಇಟ್ಟುಕೊಳ್ಳಲು ಕಾನೂನಿಗೆ ತಿದ್ದುಪಡಿ ತನ್ನಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ಸದನ ಒಪ್ಪುವುದಾದರೆ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಇರುವ ಕಂದಾಯ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ತೆಗೆದುಕೊಳ್ಳುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದರು.
ಮನಃಪರಿವರ್ತನೆ ಅಗತ್ಯ: ಆರಂಭಕ್ಕೆ ಮಾತನಾಡಿದ ಕಾರಜೋಳ, ನಕಲಿ ಜಾತಿ ದೃಢೀಕರಣ ಪತ್ರ ಪಡೆಯುವವರ ಮನಸ್ಥಿತಿ ಬದಲಾಗಬೇಕು. ಕಾನೂನಿನ ಮೂಲಕ ನಿಯಂತ್ರಣ ಅಸಾಧ್ಯ. ಮಾಜಿ ಶಾಸಕ ಕೊತ್ತನೂರು ಮಂಜುನಾಥ ವಿರುದ್ಧ ನಕಲಿ ಜಾತಿ ದೃಢೀಕರಣ ಪತ್ರ ಪಡೆದ ಪ್ರಕರಣ ದಾಖಲಾಗಿದ್ದು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ನಕಲಿ ಜಾತಿ ದೃಢೀಕರಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿರುವ ಸಂಬಂಧ ಒಟ್ಟು 68 ಪ್ರಕರಣ ದಾಖಲಾಗಿವೆ. ನಕಲಿ ಜಾತಿ ದೃಢೀಕರಣ ಪತ್ರ ನೀಡಿರುವ 27 ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಕಂದಾಯ ಇಲಾಖೆಯು ಉತ್ತರ ಕೇಳಿ ಶೋಕಾಸ್ ನೊಟೀಸ್ ಜಾರಿಗೊಳಿಸಿದೆ ಎಂದರು.
ನಕಲಿ ಜಾತಿ ದೃಢೀಕರಣ ಪತ್ರ ನೀಡುವ ತಹಶೀಲ್ದಾರ್ ಮತ್ತು ಕೆಳಹಂತದ ಸಿಬ್ಬಂದಿ ವಿರುದ್ಧ ಹಾಗೂ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ. ಈಗಾಗಲೇ 8 ಜಿಲ್ಲೆಗಳಲ್ಲಿ ಎಸ್ಸಿ-ಎಸ್ಟಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ಅವರು ವಿವರ ನೀಡಿದರು. ಮೈಸೂರು, ಬೆಳಗಾವಿ, ಕೋಲಾರ, ವಿಜಯಪುರ, ಕಲಬುರಗಿ, ರಾಯಚೂರು, ತುಮಕೂರು ಮತ್ತು ರಾಮನಗರ ಜಿಲ್ಲೆಯಲ್ಲಿನ ವಿಶೇಷ ನ್ಯಾಯಾಲಯಗಳಲ್ಲಿ ನಕಲಿ ಜಾತಿ ದೃಢೀಕರಣ ಪತ್ರ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಾರಜೋಳ ಸದನಕ್ಕೆ ಮಾಹಿತಿ ನೀಡಿದರು.
‘ನಕಲಿ ಜಾತಿ ದೃಢೀಕರಣ ಪತ್ರ ಪಡೆಯುವವರ ಮನಃ ಪರಿವರ್ತನೆ ಅಸಾಧ್ಯ. ಮನಸ್ಸು ಪರುವರ್ತನೆ ಆಗುವಂತಿದ್ದರೆ ಈ ದೇಶದಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ. ಸುಳ್ಳು ಜಾತಿ ದೃಢೀಕರಣ ಪತ್ರ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಬಿಗಿಗೊಳಿಸಿದರೆ ಭಯ ಬರುತ್ತದೆ’
-ಪಿ.ಟಿ.ಪರಮೇಶ್ವರ್ ನಾಯ್ಕ, ಕಾಂಗ್ರೆಸ್ ಸದಸ್ಯ







