ಉಡುಪಿಯಲ್ಲಿ ಮಾ.14, 15ರಂದು ವಕೀಲರಿಗಾಗಿ ರಾಜ್ಯ ಮಟ್ಟದ ವಾಲಿಬಾಲ್, ತ್ರೋಬಾಲ್ ಟೂರ್ನಿ
ಉಡುಪಿ, ಮಾ.9: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ರಾಜ್ಯಮಟ್ಟದ ವಾಲಿಬಾರ್ (ಪುರುಷರಿಗೆ) ಹಾಗೂ ತ್ರೋಬಾಲ್ (ಮಹಿಳೆಯರಿಗೆ) ಟೂರ್ನಿ ಮಾ.14 ಮತ್ತು 15ರಂದು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕೋರ್ಟ್‌ಗಳಲ್ಲಿ ನಡೆಯಲಿವೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ವಕೀಲರ ಸಂಘದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನಲು ಬೆಳಕಿನಲ್ಲಿ ಟೂರ್ನಿ ನಡೆಯಲಿವೆ. ವಾಲಿಬಾಲ್ ಪಂದ್ಯಾಟ ವಿಜೇತ ತಂಡಕ್ಕೆ 44,444 ರೂ.ನಗದು ಹಾಗೂ ಮಿರುಗುವ ಟ್ರೋಫಿ, ರನ್ನರ್‌ಅಪ್ ತಂಡಕ್ಕೆ 33,333ರೂ., ತೃತೀಯ ಸ್ಥಾನಿ ತಂಡಕ್ಕೆ 22,222ರೂ. ಮತ್ತು ಟ್ರೋಫಿ ಮತ್ತು ಚತುರ್ಥ ಸ್ಥಾನಿ ತಂಡಕ್ಕೆ 11,111ರೂ. ನಗದು ಬಹುಮಾನ ಹಾಗೂ ಶಾಶ್ವತ ಟ್ರೋಫಿ ಯನ್ನು ನೀಡಲಾಗುವುದು ಎಂದವರು ಹೇಳಿದರು.
ಮಹಿಳೆಯರ ತ್ರೋಬಾಲ್ ಟೂರ್ನಿ ವಿಜೇತ ತಂಡಕ್ಕೆ 33,333ರೂ. ಮತ್ತು ಟ್ರೋಫಿ, ರನ್ನರ್ ಅಪ್‌ಗೆ 22,222ರೂ.ನಗದು ಮತ್ತು ಟ್ರೋಫಿ, ತೃತೀಯ ಸ್ಥಾನಿಗೆ 11,111ರೂ. ಹಾಗೂ ಚತುರ್ಥ ಸ್ಥಾನಿಗೆ 7,777ರೂ.ನಗದು ಮತ್ತು ಶಾಶ್ವತ ಟ್ರೋಫಿ ನೀಡಲಾಗುವುದು. ಅಲ್ಲದೇ ಪ್ರತಿ ವಿಭಾಗದ ಉತ್ತಮ ಆಟಗಾರರಿಗೆ ಆಕರ್ಷಕ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಟೂರ್ನಿಯನ್ನು ಮಾ.14ರ ಶನಿವಾರ ಬೆಳಗ್ಗೆ 11 ಗಂಟೆಗೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಸ್.ಅಬಬ್ದ್ ನಝೀರ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಜಸ್ಟಿಸ್ ಅಶೋಕ್ ಜಿ.ನಿಜಗನ್ನವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಷಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಟೂರ್ನಿಯ ಸಮಾರೋಪ ಸಮಾರಂಭ ಮಾ.15 ರವಿವಾರ ಸಂಜೆ 7 ಗಂಟೆಗೆ ನ್ಯಾಯಮೂರ್ತಿ ಸಿ.ಎಂ.ಜೋಷಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ವಕೀಲರದ ಪರಿಷತ್‌ನ ಅಧ್ಯಕ್ಷ ಜೆ.ಎಂ.ಅನಿಲ್‌ಕುಮಾರ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ ಮುಖ್ಯ ಅತಿಥಿಗಳಾಗಿರುವರು.
ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಸುಮಾರು 25ರಿಂದ 30 ಪುರುಷ ಹಾಗೂ 10ರಿಂದ 12 ಮಹಿಳಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ದಿವಾಕರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಬಿ.ನಾಗರಾಜ್, ಟೂರ್ನಿ ಆರ್ಥಿಕ ಸಮಿತಿ ಸಂಚಾಲಕ ಶಾಂತರಾಮ ಶೆಟ್ಟಿ, ಕ್ರೀಡಾಕಾರ್ಯದರ್ಶಿ ಬಾಲಚಂದ್ರ ಹಾಗೂ ಇತರ ಪದಾಧಿಕಾರಿಗಳಾದ ಮಟ್ಟಾರು ರತ್ನಾಕರ ಹೆಗ್ಡೆ, ಅಸದುಲ್ಲಾ ಕಟಪಾಡಿ, ಎಚ್.ರಾಘವೇಂದ್ರ ಶೆಟ್ಟಿ, ಸತೀಶ್ ಪೂಜಾರಿ, ಮುರಳೀಧರ ರಾವ್ ಹಾಗೂ ರೊನಾಲ್ಡ್ ಪುಟಾಡೊ ಉಪಸ್ಥಿತರಿದ್ದರು.







