ಆದಿವಾಸಿಗಳ ಮನೆಯಂಗಳದಲ್ಲಿ ಮಹಿಳಾ ದಿನಾಚರಣೆ: ನರೇಗಾದಡಿ ಹಸಿರು ಮನೆ ಕಾರ್ಯಕ್ಕೆ ಚಾಲನೆ

ಮುಡಿಪು, ಮಾ.9: ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಕುಕ್ಕುದಕಟ್ಟೆ ಆದಿವಾಸಿ ಕೊರಗರ ಜನವಸತಿ ಪ್ರದೇಶದ ಮೀನಾಕ್ಷಿ ಗುರುವ ಅವರ ಮನೆಯಂಗಳದಲ್ಲಿ ವಿಶ್ವ ಮಹಿಳಾ ದಿನವನ್ನು ನರೇಗಾದಡಿ ಮಲ್ಲಿಗೆ ತೋಟ ಹಾಗೂ ನುಗ್ಗೆ ಗಿಡಗಳನ್ನು ನೆಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ, ಗ್ರಾಪಂ, ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಮಮತಾ ಗಟ್ಟಿ ಮಲ್ಲಿಗೆ ಗಿಡಗಳನ್ನು ನೆಟ್ಟರು.
ಬಳಿಕ ಮಾತನಾಡಿದ ಅವರು ಮಹಿಳೆ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಗೆ ನರೇಗಾ ಯೋಜನೆ ಪೂರಕವಾಗಿದೆ. ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಅರ್ಹ ಪ.ಜಾ. ಮತ್ತು ಪ.ಪಂ ಹಾಗೂ ಇತರ ಅರ್ಹ ಕುಟುಂಬಗಳ ಜಮೀನುಗಳಲ್ಲಿ ಮಲ್ಲ್ಲಿಗೆ ತೋಟ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಹಸಿರು ಮನೆ, ಆರ್ಥಿಕ ಸಶಕ್ತೀಕರಣ ಮತ್ತು ಅಪೌಷ್ಟಿಕತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.
ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರಾದ ಪ್ರದೀಪ್ ಡಿಸೋಜ, ಸಂಜೀವ್ ನಾಯ್ಕಿ, ಪಿಡಿಒ ಸುನೀಲ್ ಕುಮಾರ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸೆಲ್ಕೋದ ರವೀನಾ, ಗ್ರಾಪಂ ಸದಸ್ಯರಾದ ಜನಾರ್ದನ್, ಉಷಾ, ಪ್ರೇರಕಿ ಜಯಾ, ಗ್ರಾಪಂ ಸಿಬ್ಬಂದಿಗಳಾದ ಸದಾನಂದ, ಮೀನಾಕ್ಷಿ, ಆದಿವಾಸಿ ಕುಟುಂಬಗಳ ಹರೀಶ್, ರಾಜೇಶ್, ಸಂಜೀವ, ಬಾಬು ಉಪಸ್ಥಿತರಿದ್ದರು.





