ಸರಕಾರಿ ಭೂಮಿ ಕಬಳಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಅಶೋಕ್

ಬೆಂಗಳೂರು, ಮಾ. 9: ಸರಕಾರಿ ಭೂಮಿ ಕಬಳಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಯಲಹಂಕ ಸಮೀಪದ ಸರಕಾರಿ ಭೂಮಿ ಪರಭಾರೆ ಸಂಬಂಧ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸರಕಾರಿ ಭೂಮಿ ಖಾಸಗಿಯವರಿಗೆ ಪರಭಾರೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು
ಬೆಂಗಳೂರು ನಗರದ ಯಲಹಂಕ ಹೋಬಳಿ ಚೊಕ್ಕನಹಳ್ಳಿಯಲ್ಲಿರುವ ಜಮೀನು ದಾಖಲೆಗಳನ್ನು ತಿದ್ದಿ ಖಾಸಗಿಯವರಿಗೆ ಪರಭಾರೆ ಮಾಡಿದ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒತ್ತುವರಿ ಸರಕಾರಿ ಭೂಮಿ ತೆರವುಗೊಳಿಸಲಾಗುತ್ತಿದೆ. ಅಲ್ಲದೆ, ಈಗಾಗಲೇ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಅದಕ್ಕೆ ಎಲ್ಲ ಅಧಿಕಾರವನ್ನು ನೀಡಲಾಗಿದೆ. ಈಗಾಗಲೇ ಒತ್ತುವರಿ ತೆರವುಗೊಳಿಸಿದ 2500 ಎಕರೆ ಭೂಮಿ ಸರಕಾರದ ವಿವಿಧ ಇಲಾಖೆಗಳಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿದೆ ಎಂದರು.
ಸರಕಾರಿ ಭೂಮಿ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ಒತ್ತುವರಿ ತೆರವುಗೊಳಿಸಿರುವ ಸರಕಾರಿ ಭೂಮಿ ಕಾಪಾಡಿಕೊಳ್ಳಲು 100 ಕೋಟಿ ರೂ. ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. ತೆರವುಗೊಳಿಸಿದ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಪ್ರಕರಣವೊಂದರಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯೇ ಪತ್ರ ಬರೆದು ಸರಕಾರಿ ಭೂಮಿ ಪರಭಾರೆ ಮಾಡಬೇಡಿ ಎಂದು ಸೂಚನೆ ನೀಡಿದ್ದರೂ ಉಪನೋಂದಣಾಧಿಕಾರಿ ಕೇಳುವ ಪರಿಸ್ಥಿತಿ ಇಲ್ಲ ಎಂದು ಅಶೋಕ್ ಇದೇ ವೇಳೆ ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನಸೌಧ ಸರಕಾರದ್ದೇ ನೋಡಿ: ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಕೃಷ್ಣಬೈರೇಗೌಡ, ನನ್ನ ಕ್ಷೇತ್ರದ ಚೊಕ್ಕನಹಳ್ಳಿಯಲ್ಲಿ ಪಹಣಿಯಲ್ಲಿ ಸರಕಾರಿ ಭೂಮಿ ಎಂದು ನಮೂದಾಗಿರುವ 21ಎಕರೆ ತಮಗೆ ಮಂಜೂರಾಗಿದೆ ಎಂದು ಖಾಸಗಿ ವ್ಯಕ್ತಿಗಳು ನಕಲಿ ಆದೇಶ ಮಾಡಿದ್ದು, ಅದೇ ಆದೇಶದ ಮೇಲೆ 29 ಕೋಟಿ ರೂ.ಗಳಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿಕೊಂಡು 3 ಕೋಟಿ ರೂ.ಮುಂಗಡ ಪಡೆದಿದ್ದಾರೆ. ಪಹಣಿಯಲ್ಲಿ ಸರಕಾರಿ ಭೂಮಿ ಎಂದು ಸ್ಪಷ್ಟವಾಗಿದ್ದರೂ ಅದನ್ನು ಲೆಕ್ಕಿಸದೆ ಉಪನೋಂದಣಾಧಿಕಾರಿ ಅಗ್ರಿಮೆಂಟ್ ಅನ್ನು ನೋಂದಣಿ ಮಾಡಿದ್ದಾರೆ. ನಾನು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ ನಂತರ ತಹಶೀಲ್ದಾರ್ ಅವರು ಸಬ್ ರಿಜಿಸ್ಟಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಜಾಗದ ಪಹಣಿಯಲ್ಲಿ ಸರಕಾರಿ ಭೂಮಿ ಎಂದು ಇದೆಯೋ ಇಲ್ಲವೋ ಒಮ್ಮೆ ನೋಡಬೇಕು. ಇಲ್ಲವಾದರೆ ಇದನ್ನು ಯಾರಾದರೂ ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಿಬಿಟ್ಟಾರು ಎಂದು ಕೃಷ್ಣ ಬೈರೇಗೌಡ ಸರಕಾರವನ್ನು ಮಾತಿನಲ್ಲೆ ತಿವಿದರು.
ಭೂಗಳ್ಳರ ಸ್ವರ್ಗ ಮಾಡಬೇಡಿ
‘ಬೆಂಗಳೂರು ಭೂಗಳ್ಳರ ಸ್ವರ್ಗವಾಗಿದ್ದು, ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡಬೇಡಿ. ಬೆಂಗಳೂರಿನ ಜನಸಂಖ್ಯೆ ಬೆಳೆಯುತ್ತಿದೆ. ಆದರೆ, ಭೂಮಿ ಬೆಳೆಯುವುದಿಲ್ಲ. ಹೀಗಾಗಿ ಸರಕಾರಿ ಭೂಮಿ ರಕ್ಷಣೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’
-ಎ.ಟಿ.ರಾಮಸ್ವಾಮಿ, ಜೆಡಿಎಸ್‌ನ ಹಿರಿಯ ಸದಸ್ಯ







