ದರ್ಬೆ ವೃತ್ತಕ್ಕೆ ಡಾ. ಅಂಬೇಡ್ಕರ್ ಹೆಸರಿಡಲು ಒತ್ತಾಯ: ಪುತ್ತೂರು ಬಹುಜನ ಒಕ್ಕೂಟ ಪ್ರತಿಭಟನೆ

ಪುತ್ತೂರು: ಪುತ್ತೂರಿನಲ್ಲಿರುವ ದರ್ಬೆ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ.ಆರ್. ಅಂಬೇಡ್ಕರ್ ಎಂದು ನಾಮಕರಣ ಮಾಡಬೇಕು ಮತ್ತು ನಗರದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬೇಕು. ಮುಂದಿನ ಒಂದು ವರ್ಷದೊಳಗಾಗಿ ಈ ಕಾರ್ಯ ಆಗದಿದ್ದಲ್ಲಿ ನಗರದ ಮಿನಿ ವಿಧಾನ ಸೌಧದ ಬಳಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಉಗುಳು ಚಳುವಳಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಮಿತ್ತಬೈಲ್ ಎಚ್ಚರಿಕೆ ನೀಡಿದ್ದಾರೆ.
ಅವರು ನಗರದ ದರ್ಬೆ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ.ಆರ್. ಅಂಬೇಡ್ಕರ್ ಎಂದು ನಾಮಕರಣ ಮಾಡಬೇಕು ಆಗ್ರಹಿಸಿ ಪುತ್ತೂರಿನ ಬಹುಜನ ಒಕ್ಕೂಟ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ದರ್ಬೆ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಅವರ ಹೆಸರನ್ನಿಡಬೇಕೆಂದು ದಲಿತ ಸಂಘಟನೆಯ ವತಿಯಿಂದ ಹಲವು ಸಮಯಗಳಿಂದ ಒತ್ತಾಯಿಸುತ್ತಾ ಬರಲಾಗುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸಲು ಒಂದು ವರ್ಷದ ಅವಕಾಶವನ್ನು ನೀಡಲಾಗುವುದು. ಬಳಿಕವೂ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಮಿನಿ ವಿಧಾನಸೌಧಕ್ಕೆ ಮತ್ತು ನಗರಸಭೆಗೆ ನಿತ್ಯ ಅಗಮಿಸುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ವಿವಿಧ ಪಕ್ಷಗಳ ಜನಪ್ರತಿನಿಧಿಗಳ ಮುಖಕ್ಕೆ ಛಿ... ಥೂ... ಎಂದು ಉಗುಳನ್ನು ಚೆಲ್ಲುವ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಭಾರತದ ಸಂವಿಧಾನ ಕುರಿತು ಕಿಂಚಿತ್ತೂ ಗೌರವ ಇದ್ದಲ್ಲಿ, ಮಾನ ಮರ್ಯಾದೆ ಇದ್ದರೆ ಈ ಎರಡು ಬೇಡಿಕೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೆರವೇರಿಸಬೇಕಾಗಿದೆ. ಇಂತಹ ನೈತಿಕತೆ ನಿಮ್ಮಲ್ಲಿ ಇಲ್ಲದಿದ್ದರೆ ನಿಮ್ಮ ಮುಖಕ್ಕೆ ಉಗುಳುವಂತಹ ಪ್ರತಿಭಟನೆಯನ್ನು ಹೊರತು ಪಡಿಸಿದರೆ ಅನ್ಯ ಮಾರ್ಗವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ಅನಿವಾರ್ಯ ಪರಿಸ್ಥಿತಿಯನ್ನು ತಂದೊಡ್ಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ. ಸಿದ್ದೀಕ್ ಮಾತನಾಡಿದರು. ಬಹುಜನ ಒಕ್ಕೂಟ ಹೋರಾಟ ಸಮಿತಿಯ ಮುಖಂಡರಾದ ಗಿರಿಯಪ್ಪ ನಾಯ್ಕ ಅವರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ್ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಕ್ಕೂಟದ ಪ್ರಮುಖರಾದ ಬಿ.ಕೆ. ಸೇಸಪ್ಪ ಬೆದ್ರಕಾಡು, ಗಿರಿಧರ ನಾಯ್ಕ್, ಆನಂದ ಬೆಳ್ಳಾರೆ, ಅಬ್ದುಲ್ ಹಮೀದ್ ಸಾಲ್ಮರ, ಮನೋಹರ್ ಕೋಡಿಜಾಲು, ನಿಶಾಂತ್ ಮುಂಡೋಡಿ, ಉದಯ ಕುಮಾರ್ ಎರಕಿಲ, ಸುಂದರ ನಿಡ್ಪಳ್ಳಿ, ಗಣೇಶ್ ಗುರಿಯಾನ, ಗಣೇಶ್ ಕಾರೆಕ್ಕಾಡು, ರಾಜು ಹೊಸ್ಮಠ, ವಸಂತ ಮುಂಡೋಡಿ, ಶೇಖರ ಮಾಡಾವು, ನೇಮಿರಾಜ್ ಕಿಲ್ಲೂರು, ಸೇಸಪ್ಪ ನೆಕ್ಕಿಲು, ಪರಮೇಶ್ವರ ಕೆಮ್ಮಿಂಜೆ, ಸಮೀರ್ ನಾಜೂಕ್, ಬಾಬು ಎನ್. ಸವಣೂರು, ಉಮೇಶ್ ತ್ಯಾಗರಾಜನಗರ, ಪ್ರಮೋದ್ ತಿಂಗಳಾಡಿ, ಅಣ್ಣಪ್ಪ ಕೌರೆಕ್ಕಾಡು, ಆನಂದ ಕೌಡಿಚ್ಚಾರು, ಕೃಷ್ಣ ನಿಡ್ಪಳ್ಳಿ, ಜಬೀರ್ ಆಲಿಯಬ್ಬ, ಎಸ್.ಡಿ.ಪಿ.ಐ.ನ ಇಬ್ರಾಹಿಂ ಹಾಜಿ ಸಾಗರ್, ಅಶ್ರಫ್ ಬಾವು, ಸುಮತಿ ಸರ್ವೇ ಮತ್ತಿತರರು ಉಪಸ್ಥಿತರಿದ್ದರು.







