ಅಫ್ಘಾನ್: ಅಧ್ಯಕ್ಷರಾಗಿ ಅಶ್ರಫ್ ಘನಿ ಪ್ರಮಾಣವಚನ
ವಿಪಕ್ಷ ನಾಯಕನಿಂದ ‘ಬಂಡಾಯ’ ಪ್ರಮಾಣ

Photo: twitter.com/ashrafghani/photo
ಕಾಬೂಲ್,ಮಾ.9: ಎರಡನೆ ಅವಧಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಅಶ್ರಫ್ ಘನಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರ ಪ್ರಮುಖ ಎದುರಾಳಿಯಾದ ಅಬ್ದುಲ್ಲಾ ಅಬ್ದುಲ್ಲಾ, ಸರಕಾರದ ರಚನೆಯನ್ನು ಮಾನ್ಯ ಮಾಡಲು ನಿರಾಕರಿಸಿದ್ದು, ತಾನಾಗಿಯೇ ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿ ಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಹೊಸ ರಾಜಕೀಯ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿದ್ದಾರೆ.
ಇಂದು ಕಾಬೂಲ್ನ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಮೆರಿಕದ ವಿಶೇಷ ಪ್ರತಿನಿಧಿ ಝಲ್ಮೆ ಖಲೀಲ್ ಝಾದ್,ಅಮೆರಿಕ ಮತ್ತು ನ್ಯಾಟೊ ಪಡೆಗಳ ಕಮಾಂಡರ್ ಜನರಲ್ ಸ್ಕಾಟ್ ಮಿಲ್ಲರ್ ಸೇರಿದಂತೆ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಅಫ್ಘಾನಿಸ್ತಾನದ ಮುಖ್ಯರಾಯಭಾರಿ ಸೈಯದ್ ಯೂಸುಫ್ ಹಲೀಂ ಅವರು ಪ್ರಮಾಣವಚನ ಬೋಧಿಸಿದರು.
ಆದರೆ ಕಳೆದ ತಿಂಗಳು ಪ್ರಕಟಗೊಂಡ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಅಬ್ದುಲ್ಲಾ ಅಬ್ದುಲ್ಲಾ ಅವರು ತಿರಸ್ಕರಿಸಿದ್ದಾರೆ. ಘನಿ ಅವರು ಚುನಾ ವಣಾ ಅಕ್ರಮಗಳನ್ನು ಎಸಗಿ ಅಧಿಕಾರಕ್ಕೇರಿದ್ದಾರೆಂದು ಅಬ್ದುಲ್ಲಾ ಆಪಾದಿಸಿದ್ದಾರೆ.
ಘನಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲೇ ಕಾಬೂಲ್ನ ಇನ್ನೊಂದೆಡೆ ಅಬ್ದುಲ್ಲಾ ಅಬ್ದುಲ್ಲಾ ತಾನೇ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಬೆಂಬಲಿಗರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮಧ್ಯೆ ಅಮೆರಿಕದ ಪ್ರತಿನಿಧಿ ಖಲೀಲ್ಝಾದ್ ಅವರು ಘನಿ ಹಾಗೂ ಅಬ್ದುಲ್ಲಾ ಅವರ ಪಾಳಯಗಳ ನಡುವೆ ಸಂಧಾನದ ಮಾತುಕತೆ ನಡೆಸುತ್ತಿದ್ದಾರೆ.







