ಬಂಟ್ವಾಳ: ಮನೆಯ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

ಬಂಟ್ವಾಳ, ಮಾ.9: ಮನೆಯ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಳಿಕೆ ಗ್ರಾಮದ ಬೈರಿಕಟ್ಟೆ ಕರಡಿಗುಳಿ ಎಂಬಲ್ಲಿ ನಡೆದಿದ್ದು ಈ ಬಗ್ಗೆ ದೂರು ದಾಖಲಾಗಿದೆ.
ಇಲ್ಲಿನ ಗಣಪತಿ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.
ಗಾರೆ ಕೆಲಸ ಮಾಡುವ ಗಣಪತಿ ಮತ್ತು ಅವರ ಪತ್ನಿ ಆಯುರ್ವೇದ ಔಷಧಿ ತಯಾರಿಕೆಯ ಕೂಲಿ ಕೆಲಸ ಮಾಡುವ ಕವಿತಾ ಎಂದಿನಂತೆ ಸೋಮವಾರ ಬೆಳಗ್ಗೆ 8:30ರ ವೇಳೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು ಸಂಜೆ 5:15ರ ವೇಳೆಗೆ ಕವಿತಾ ಅವರು ಮನೆಗೆ ಬಂದು ಶೌಚಾಲಯಕ್ಕೆ ತೆರಳಿದಾಗ ಶೌಚಾಲಯದ ಗೋಡೆಯನ್ನು ಒಬ್ಬ ಮನುಷ್ಯ ಒಳ ಪ್ರವೇಶಿಸುವಷ್ಟು ಆಕಾರದಲ್ಲಿ ಕೊರೆಯಲಾಗಿತ್ತು. ಅವರು ಕೂಡಲೇ ಮನೆಯ ಕೊಠಡಿಗೆ ತೆರಳಿ ನೋಡಿದಾಗ ಕೊಠಡಿಯಲ್ಲಿದ್ದ ಕಪಾಟು ತೆರೆದಿತ್ತು. ಅಲ್ಲದೆ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳವಾಗಿತ್ತು ಎಂದು ಗಣಪತಿ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





