ಭೂ ಕಬಳಿಕೆ ತನಿಖೆಗೆ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಸದನ ಸಮಿತಿ: ಯಡಿಯೂರಪ್ಪ

ಬೆಂಗಳೂರು, ಮಾ.9: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಭೂಮಿ ಕಬಳಿಕೆ ಆಗಿದ್ದು, ಈ ಸಂಬಂಧ ತನಿಖೆ ಮತ್ತು ವರದಿ ಸಲ್ಲಿಕೆ ಪ್ರಕ್ರಿಯೆಗಾಗಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಸದನ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸೋಮವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು.
ಭೂಕಬಳಿಕೆ ತನಿಖಾ ಸಮಿತಿಯಲ್ಲಿ ಎ.ಟಿ.ರಾಮಸ್ವಾಮಿ ಸೇರಿದಂತೆ ಪ್ರಮುಖ ಸದಸ್ಯರಾಗಿದ್ದಾರೆ. ಅಲ್ಲದೆ, ಸಮಿತಿಗೆ ಅವರನ್ನೇ ಅಧ್ಯಕ್ಷರಾಗಿ ಎಂದು ಹೇಳಲಾಗಿತ್ತು. ಆದರೆ, ಅವರು ಒಪ್ಪದ ಕಾರಣ ಬೋಪಯ್ಯ ಅವರ ಅಧ್ಯಕ್ಷತೆ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಿತಿ ವರದಿ ನೀಡಿದ ಬಳಿಕ ಒತ್ತುವರಿ ತೆರವುಗೊಳಿಸಲಾಗುವುದು. ಒತ್ತುವರಿ ಭೂಮಿಯಿಂದ ಸರಕಾರ, ರಾಜ್ಯದ ಬೊಕ್ಕಸಕ್ಕೂ 10 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.





