ಪತಿಯ ಕಿರುಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮೃತ್ಯು

ಮೈಸೂರು,ಮಾ.9: ಪತಿಯ ಕಿರುಕುಳ ತಾಳಲಾರದೆ ಗೃಹಿಣಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಮಾ.3ರಂದು ನಡೆದಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ನಾಗವೇಣಿ ಅಲಿಯಾಸ್ ಮಣಿ (41) ಎಂಬವರೇ ಮೃತಪಟ್ಟವರು. ಇವರ ಪತಿ ಹುಣಸೂರು ತಾಲೂಕಿನಲ್ಲಿ ಸಹಾಯಕ ಶಿಶುಯೋಜನಾ ಅಧಿಕಾರಿಯಾಗಿದ್ದಾರೆ. ಇವರು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
1997ರಲ್ಲಿ ವೆಂಕಟಪ್ಪನಿಗೆ ಮಣಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಮಾರ್ಚ್ 3ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ನೋಡಿದ ಕುಟುಂಬಸ್ಥರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ನಾಗವೇಣಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಲು ವೆಂಕಟಪ್ಪ ಯತ್ನಿಸಿದ್ದ ಎಂದು ನಾಗವೇಣಿ ಪೋಷಕರು ಆರೋಪಿಸಿದ್ದು, ಈ ಸಂಬಂಧ ದೂರು ನೀಡಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





