ಗ್ರಾಮೀಣ ಜನರು ಎರಡನೇ ದರ್ಜೆಯ ಪ್ರಜೆಗಳಾಗಿಯೇ ಇದ್ದಾರೆ: ಮಾಧುಸ್ವಾಮಿ ಬೇಸರ

ಬೆಂಗಳೂರು, ಮಾ.10: ಗ್ರಾಮೀಣ ಪ್ರದೇಶದ ಜನರು ಇಂದಿಗೂ ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುತ್ತಿದ್ದು, ಸರಕಾರಗಳು ಸಾಮಾಜಿಕ ಸಮಾನತೆ ಅಡಿಯಲ್ಲಿ ಇವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ವಿಧಾನಪರಿಷತ್‌ನಲ್ಲಿ ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ಭಾರತವು ಹಳ್ಳಿಗಳಿಂದ ಕೂಡಿದ್ದು, ಎಲ್ಲ ಹಳ್ಳಿಗಳೂ ಅಭಿವೃದ್ಧಿಯಾಗಬೇಕು ಎಂದು ಕನಸು ಕಂಡಿದ್ದರು. ಅಂಬೇಡ್ಕರ್ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಇವೆರಡನ್ನೂ ಇದುವರೆಗೂ ಪೂರ್ಣಗೊಳಿಸಲಾಗಿಲ್ಲ ಎಂದರು. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಗ್ರಾಮೀಣ ಪ್ರದೇಶದ ಜನರನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಎಲ್ಲರಿಗೂ ರಾಜಕೀಯ ಅಧಿಕಾರ ನೀಡಿದ್ದೇವೆ. ಆದರೂ, ಅದು ಅಷ್ಟಕ್ಕೆ ಸಾಕಾಗುವುದಿಲ್ಲ ಎಂದ ಅವರು, ದೇಶದ ಜನರ ಎದುರು ನಮಗೆ ಇರಬೇಕಾದ ಗೌರವ, ನಮ್ಮಗಳ ಸ್ವಜನ ಪಕ್ಷಪಾತದಿಂದ ಕೆಳಕ್ಕೆ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿಯು ದುಡಿಯುವ ಜನರಿಂದ ಹಿಡಿದು, ಕಾನೂನು ಮಾಡುವವರೆಗೂ ಜ್ಞಾನವನ್ನು ಹೊಂದಿದ್ದರು. ಅಂತಹವರು ನಮ್ಮ ದೇಶದ ರಾಷ್ಟ್ರಪಿತ ಆಗಿದ್ದಾರೆ. ಆದರೆ, ಅವರ ಆಶಯಗಳನ್ನು ನಾವು ನನಸು ಮಾಡಲು ಸಾಧ್ಯವಾಗಿಲ್ಲ. ಯಾವ ಕೈಗಳಿಗೆ ಕೆಲಸ ಕೊಡಬೇಕಿತ್ತೋ, ಅದು ನೀಡಲು ಸಾಧ್ಯವಾಗಿಲ್ಲ. ಬಸವಣ್ಣರ ಕಾಯಕವೇ ಕೈಲಾಸ ಎಂಬ ವಾಕ್ಯವನ್ನು ಮನಗಾಣಬೇಕಿದೆ ಎಂದು ಸಲಹೆ ನೀಡಿದರು.
ಯುವಕರ ಕನಸು ಇಂದಿಗೂ ನನಸಾಗಿಲ್ಲ ಎಂದ ಅವರು, ಯುವ ಪೀಳಿಗೆಗೆ ಏನು ಸಂದೇಶ ಬಿಟ್ಟಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ದೇಶದ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕಿದೆ. ದೇಶದಾದ್ಯಂತ ಸಂವಿಧಾನದ ಆಶಯಗಳ ಕುರಿತು ಮರು ವಿಮರ್ಶೆ, ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಮಾಧುಸ್ವಾಮಿ ಅಭಿಪ್ರಾಯಿಸಿದರು.
ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಪ್ರಕರಣಗಳು ಇಂದಿಗೂ ಇತ್ಯರ್ಥವಾಗದೇ ನ್ಯಾಯಾಲಯಗಳಲ್ಲಿ ಉಳಿದಿವೆ. ಅಲ್ಲದೆ, ಸರಕಾರಗಳು ವಿಶೇಷ ನ್ಯಾಯಾಲಯಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನ್ಯಾಯಾಲಯಗಳನ್ನು ತೆರೆಯಲಾಗುತ್ತಿದೆ. ಆದರೂ, ಪ್ರಕರಣಗಳ ಇತ್ಯರ್ಥವಾಗುತ್ತಿಲ್ಲ ಎಂದ ಅವರು, ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಮಾಡುತ್ತಿರುವ ವೆಚ್ಚ ನೋಡಿದರೆ ಭಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪರಿಷತ್‌ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮೊಕದ್ದಮೆಗಳಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬಂತಾಗಿದೆ ಎಂದರು. ಇದೇ ವೇಳೆ ಪ್ರತಿಕ್ರಿಯಿಸಿದ ಜೆಡಿಎಸ್‌ನ ಶ್ರೀಕಂಠೇಗೌಡ, ಲಕ್ಷಾಂತರ ವ್ಯಾಜ್ಯಗಳು ಇತ್ಯರ್ಥವಾಗಿಲ್ಲ. ಕಾನೂನು ವ್ಯವಸ್ಥೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡುವ ಬದಲು, ನ್ಯಾಯಾಂಗ ವ್ಯವಸ್ಥೆಯ ಲೋಪಗಳನ್ನು ಪಟ್ಟಿ ಮಾಡಬೇಕಿದೆ ಎಂದರು.
ಐಎಂಎ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂಬ ಮನವಿ ಬಂದಿದೆ. ಈ ಕುರಿತು ಪರಿಶೀಲನೆ ಮಾಡಲಾಗುತ್ತಿದ್ದು, ಅಗತ್ಯವಿದ್ದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು. ಈ ಪ್ರಕರಣದಲ್ಲಿ 1500 ಕ್ಕೂ ಅಧಿಕ ಸಾಕ್ಷಿಗಳಿದ್ದು, ಎಲ್ಲರನ್ನೂ ವಿಚಾರಣೆ ನಡೆಸಬೇಕಾಗಿದೆ. ಈ ಬಗ್ಗೆ ಶೀಘ್ರ ನಿರ್ಣಯ ಮಾಡಲಾಗುವುದು.
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ







