ಭಾರತದಲ್ಲಿ 61 ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಮಾ.10: ಕೇರಳದಲ್ಲಿ ಹಾಗೂ ಕರ್ನಾಟಕದಲ್ಲಿ ಕೊರೋನ ವೈರಾಣು ಸೋಂಕಿತ ಹೊಸ 9 ಪ್ರಕರಣಗಳು ದೃಡಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ಈ ನಡುವೆ ಭಾರತೀಯ ವಾಯುಪಡೆಯ ಸಾಗಾಟ ವಿಮಾನದ ಮೂಲಕ ಕೊರೋನ ಪೀಡಿತ ಇರಾನ್‌ನಿಂದ 58 ಮಂದಿ ಭಾರತಿಯರನ್ನು ಭಾರತಕ್ಕೆ ಕರೆ ತಂದಿದೆ. ಭಾರತೀಯರನ್ನು ಕರೆ ತರಲು ಸಿ-17 ಗ್ಲೋಬ್‌ಮಾಸ್ಟರ್ ವಿಮಾನವನ್ನು ಸೋಮವಾರ ಸಂಜೆ ಟೆಹ್ರಾನ್‌ಗೆ ಕಳುಹಿಸಲಾಗಿತ್ತು.
ಕೇರಳದಲ್ಲಿ ಕೊರೋನ ವೈರಸ್ ಸೋಂಕಿತ ಹೊಸ 6 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ಪ್ರಕರಣಗಳು 12ಕ್ಕೆ ಏರಿಕೆಯಾಗಿವೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಒಟ್ಟು 12 ಕೊರೋನ ಸೋಂಕಿತರಲ್ಲಿ ಪತ್ತನಂತಿಟ್ಟದಲ್ಲಿ 9, ಕೊಟ್ಟಾಯಂನಲ್ಲಿ 2 ಹಾಗೂ ಕೊಚ್ಚಿಯಲ್ಲಿ 1 ದೃಢಪಟ್ಟಿವೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸುಮಾರು 270 ಜನರು ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗಳ ಸಂಪರ್ಕ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ. ಇವರಲ್ಲಿ 95 ಮಂದಿ ‘ಅತಿ ಅಪಾಯಕಾರಿ ವರ್ಗ’ದಲ್ಲಿ ಇದ್ದಾರೆ. ಹೊಸ ಪ್ರಕರಣಗಳು ಪತ್ತೆಯಾದ ಬಳಿಕ ನಿಗಾವನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 1,116 ಜನರನ್ನು ನಿಗಾದಲ್ಲಿ ಇರಿಸಲಾಗಿದೆ. 976 ಜನರನ್ನು ಮನೆಯಲ್ಲಿ ಹಾಗೂ 149 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಇರಿಸಲಾಗಿದೆ. ಇವರಲ್ಲಿ ರೋಗ ಲಕ್ಷಣ ಒಳಗೊಂಡವರು ಕೂಡ ಸೇರಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
‘‘ಕರ್ನಾಟಕದಲ್ಲಿ 3 ಕೊರೋನ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಸೋಂಕಿತ ವ್ಯಕ್ತಿಗಳು ಹಾಗೂ ಅವರ ಕುಟುಂಬವನ್ನು ಪ್ರತ್ಯೇಕವಾಗಿ ಹಾಗೂ ಪರಿವೀಕ್ಷಣೆಯಲ್ಲಿ ಇರಿಸಲಾಗಿದೆ’’ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ. ಶ್ರಿರಾಮುಲು ಹೇಳಿದ್ದಾರೆ.
ಸೋಮವಾರ ಭಾರತಕ್ಕೆ ಆಗಮಿಸಿದ 8.47 ಲಕ್ಷ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ವಿದೇಶಿ ಹಡಗುಗಳು ಭಾರತೀಯ ಬಂದರುಗಳಿಗೆ ಆಗಮಿಸದಂತೆ ನಿರ್ಬಂಧ ವಿಧಿಸಲಾಗಿದೆ. ಇಟಲಿ, ಇರಾನ್, ದಕ್ಷಿಣ ಕೊರಿಯಾ ಹಾಗೂ ಜಪಾನ್‌ನಿಂದ ಇಲ್ಲಿಗೆ ಆಗಮಿಸಲು ಮಾರ್ಚ್ 3 ಹಾಗೂ ಅನಂತರ ನೀಡಲಾದ ವಿಸಾ ಹಾಗೂ ಈ ವಿಸಾವನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಕೇರಳದಲ್ಲಿ ಸಿನೆಮಾ ಚಿತ್ರಮಂದಿರ ಬಂದ್, ಪ್ರಾಥಮಿಕ ಶಾಲೆಗಳಿಗೆ ರಜೆ ಕೊರೋನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕೇರಳ ಚಿತ್ರ ಮಂದಿರಗಳನ್ನು ಮಾರ್ಚ್ 31ರ ವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ.
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾರ್ಚ್ 31ರ ವರೆಗೆ ರಜೆ ಘೋಷಿಸಲಾಗಿದೆ. ಆದರೆ, ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿದೆ. ಇದು ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೆ ಕೂಡ ಅನ್ವಯವಾಗಲಿದೆ.







