ಲಕ್ಷ್ಮೀಂದ್ರನಗರದಲ್ಲಿ ಯುಟರ್ನ್‌ಗೆ ಆಗ್ರಹಿಸಿ ಸ್ಥಳೀಯರಿಂದ ಧರಣಿ

ಮಣಿಪಾಲ, ಮಾ.10: ಮಣಿಪಾಲದ ಲಕ್ಷ್ಮೀಂದ್ರನಗರ ಮತ್ತು ವಿಭುದ ಪ್ರಿಯ ನಗರದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುಟರ್ನ್ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಲಕ್ಷ್ಮೀಂದ್ರನಗರದ ಹೆದ್ದಾರಿ ಚರಂಡಿಯ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಆಗ್ರಹಿಸಿ ಲಕ್ಷ್ಮೀಂದ್ರನಗರ ನಾಗರಿಕರ ಸಮಿತಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ಸಮಿತಿಯ ಅಧ್ಯಕ್ಷ ರವೀಂದ್ರ ಕಾಮತ್ ಮಾತನಾಡಿ, ಲಕ್ಷ್ಮೀಂದ್ರನಗರ, ವಿಭುದಪ್ರಿಯ ನಗರ, ಹಯಗ್ರೀವ ನಗರ, ಸಗ್ರಿ, ಕುಂಡೇಲು, ಗುಳ್ಮೆ ಪ್ರದೇಶ ಗಳಲ್ಲಿ ಸುಮಾರು 1500 ಕುಟುಂಬಗಳು ವಾಸ ಮಾಡಿಕೊಂಡಿದ್ದು, ಇವರು ಮಣಿಪಾಲ ಸಿಂಡಿಕೇಟ್ ಸರ್ಕಲ್ ನಂತರ ಯುಟರ್ನ್ ಪಡೆದುಕೊಳ್ಳಲು ಸುಮಾರು ಎರಡು ಕಿ.ಮೀ. ದೂರದ ಇಂದ್ರಾಳಿಗೆ ಹೋಗಬೇಕಾಗುತ್ತದೆ. ಇದರಿಂದ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ರಿಕ್ಷಾ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇಲ್ಲಿ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಕಾರಣವನ್ನು ನೀಡಿ ಪೊಲೀಸ್ ಇಲಾಖೆ ಯುಟರ್ನ್ ನಿರ್ಮಿಸಲು ಅನುಮತಿ ನೀಡುತ್ತಿಲ್ಲ. ಇಲ್ಲಿ ಬ್ಯಾರಿಕೇಡ್ ಗಳನ್ನು ಹಾಕುವುದರಿಂದ ಅಪಘಾತ ಹಾಗೂ ವಾಹನ ವೇಗಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಸಮಿತಿ ನೀಡಲಿದೆ. ಒಟ್ಟಾರೆ ಜನಸ್ನೇಹಿಯಾಗಿರುವ ಯುಟರ್ನ್‌ನ್ನು ಅಗತ್ಯವಾಗಿ ನಿರ್ಮಿಸಬೆೀಕು ಎಂದು ಅವರು ಒತ್ತಾಯಿಸಿದರು.
ಅದೇ ರೀತಿ ಲಕ್ಷ್ಮೀಂದ್ರನಗರದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಯನ್ನು ಸ್ಥಗಿತಗೊಳಿಸಲಾಗಿದ್ದು, ಮುಂದೆ ಮಳೆಗಾಲದಲ್ಲಿ ನೀರು ಹರಿದು ಹೋಗಲು ಜಾಗ ಇಲ್ಲದೆ ಇಲ್ಲಿನ ಅಂಗಡಿ, ಮನೆಗಳು ಜಲಾವೃತಗೊಳ್ಳುವ ಸಾಧ್ಯತೆಗಳಿವೆ. ಆದುದರಿಂದ ಕೂಡಲೇ ಈ ಚರಂಡಿ ಕಾಮಗಾರಿ ಯನ್ನು ಪೂರ್ಣಗೊಳಿಸೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಕೃಷ್ಣ ಹೆಬ್ಬಾರ್, ಯೋಗೀಶ್ ನಾಯಕ್, ಸುರೇಶ್ ಬೆಳ್ಳಿರಾಯ, ಸತೀಶ್ ರಾವ್ ನಗರಸಭೆ ಸದಸ್ಯರಾದ ಭಾರತಿ ಪ್ರಶಾಂತ್, ಅಶೋಕ್ ನಾಯ್ಕಿ, ಮಂಜುನಾಥ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು.







