ಸಂಘಟನೆಯಿಂದ ಗುರಿ ತಲುಪಿದರೆ ನ್ಯಾಯ: ಶ್ಯಾಮಲಾ ಕುಂದರ್
ಉಡುಪಿ, ಮಾ.10: ಸಂಘಟನೆಯ ಮೂಲಕ ಗುರಿ ತಲುಪಿದರೆ ಮಾತ್ರ ಇಂದು ನ್ಯಾಯ ಸಿಗಲು ಸಾಧ್ಯ. ಕಟ್ಟುಪಾಟುಗಳ ಇತಿಮಿತಿಯೊಳಗೆ ಮಹಿಳೆ ಯರು ತಮ್ಮ ಸಾಧನೆಗಳನ್ನು ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದ್ದಾರೆ.
ಉಡುಪಿ ವಲಯ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ವತಿಯಿಂದ ನಗರದ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲಾ ಮಹಿಳೆಯರು ಸೌಂದರ್ಯಕ್ಕೆ ಒತ್ತು ನೀಡುತ್ತಾರೆ. ಈ ಕಾರಣಕ್ಕೆ ಸೌಂದರ್ಯ ಅನ್ನುವುದು ಗ್ರಾಮೀಣ ಭಾಗದಂತೆ ನಗರಗಳಲ್ಲೂ ಪ್ರಸಿದ್ದಿಯನ್ನು ಪಡೆದಿದೆ. ಸೌಂದರ್ಯ ಕಾಳಜಿಗೆ ಮಹಿಳೆಯರ ಕೊಡುಗೆ ಅಪಾರ. ಮನೆಯಲ್ಲಿ ಗೃಹಿಣಿಯರಿಂದ ಆ ಮನೆಯ ಆಂತರಿಕ ಸೌಂದರ್ಯ ತಿಳಿಯುತ್ತದೆ ಎಂದವರು ನುಡಿದರು.
ಉಡುಪಿ ಮಹಿಳಾ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ ಮುಕ್ತಾ ಭಾಯಿ ಮಾತನಾಡಿ, ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರಕರಣಗಳಲ್ಲೂ ನ್ಯಾಯ ದೊರಕಿಸಿಕೊಡುವ ಮೂಲಕ ಪೊಲೀಸರು ಇಂದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ನೀಡುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದರು.
ಉಡುಪಿ ವಲಯ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ ರೇಶ್ಮಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷೆ ಮರಿಯಾ ಮೋಲಿ ಫೆರ್ನಾಂಡಿಸ್, ಜಿಲ್ಲಾ ಅಧ್ಯಕ್ಷೆ ವೇದಾ ಸುವರ್ಣ, ಉಡುಪಿ ವಲಯ ಕಾರ್ಯದರ್ಶಿ ರೇಖಾ ಪಾಲನ್, ಕೋಶಾಧಿಕಾರಿ ಶಕುಂತಳಾ ಹಾಗೂ ಸಂಘದ ಪಿಆರ್‌ಒ ಸುಪ್ರಿಯಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಶ್ಯಾಮಲಾ ಎಸ್.ಕುಂದರ್ ಹಾಗೂ ಮುಕ್ತಾ ಭಾಯಿ ಇವರನ್ನು ಸನ್ಮಾನಿಸಲಾಯಿತು. ಸುಪ್ರಿಯಾ ಸ್ವಾಗತಿಸಿ, ಗೀತಾ ದಯಾನಂದ್ ಕಾರ್ಯಕ್ರಮ ನಿರೂಪಿಸಿದರು.







