ಎಪ್ರಿಲ್ 15ರಿಂದ 29ರವರೆಗೆ ದ.ಕ. ಜಿಲ್ಲೆಯಲ್ಲಿ ಜನಗಣತಿ ಕಾರ್ಯ: ಡಿಸಿ
ಲೋಪಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳಿಗೆ ಸೂಚನೆ

4,100 ಗಣತಿದಾರರು, 500 ಮೇಲ್ವಿಚಾರಕರು, 114 ಕ್ಷೇತ್ರ ತರಬೇತುದಾರರು, 28 ಚಾರ್ಜ್ ಅಧಿಕಾರಿಗಳ ನೇಮಕ
ಮಂಗಳೂರು, ಮಾ.10: ಜಿಲ್ಲೆಯಲ್ಲಿ ಎ.15ರಿಂದ ಮೇ 29ರವರೆಗೆ ಜನಗಣತಿ ನಡೆಯಲಿದ್ದು, ಇದಕ್ಕಾಗಿ ಸುಮಾರು 4,100 ಗಣತಿದಾರರು, 500 ಮೇಲ್ವಿಚಾಕರು, 114 ಕ್ಷೇತ್ರ ತರಬೇತುದಾರರು, 28 ಚಾರ್ಜ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.
ನಗರದ ಬೆಸೆಂಟ್ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜನಗಣತಿ-2021 ಕ್ಷೇತ್ರ ತರಬೇತುದಾರರ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಜನಸಾಮಾನ್ಯರ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಪ್ರಮುಖ ಕಾರ್ಯ ಇದಾಗಿದೆ. ಪ್ರಸುತ್ತ ನಡೆಯುವ ಜನಗಣತಿಯು 16ನೇ ಜನಗಣತಿಯಾಗಿದೆ. ಅಧಿಕಾರಿಗಳು ಜನಗಣತಿ ಸಂದರ್ಭ ಮನೆಗೆ ಬಂದಾಗ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು. ಜನಗಣತಿಯ ವೇಳೆ ಪಡೆದ ಎಲ್ಲಾ ಮಾಹಿತಿ ಗೌಪ್ಯವಾಗಿಡಲಾಗುತ್ತದೆ. ಈ ಜನಗಣತಿಯಲ್ಲಿ 34 ಪ್ರಶ್ನೆಗಳು ಒಳಗೊಂಡಿದೆ ಎಂದರು.
ಜನಗಣತಿಗೆ ನಿಯೋಜಗೊಂಡಿರುವ ಅಧಿಕಾರಿಗಳು ಮಾಹಿತಿ ಸಂಗ್ರಹಣೆ ಮಾಡುವ ಸಂದರ್ಭ ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಸಂದೇಹ ಬಂದಲ್ಲಿ ಮೇಲ್ವಿಚಾರಕರಿಂದ ತರಬೇತುದಾರರು ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಸಿ ಹೇಳಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಎಂಜೆ ರೂಪಾ, ಜಿಲ್ಲಾ ಸಹಾಯಕ ಸಾಂಖ್ಯಿಕ ಅಧಿಕಾರಿ ಉದಯ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







