ಎನ್‌ಪಿಆರ್ ಕೈಬಿಡುವಂತೆ ಒತ್ತಾಯಿಸಿ ಮಾ.12ರಂದು ಉಪವಾಸ ಸತ್ಯಾಗ್ರಹ
ಉಡುಪಿ, ಮಾ.10: ಸಹಬಾಳ್ವೆ ಉಡುಪಿ ಇದರ ನೇತೃತ್ವದಲ್ಲಿ ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್) ಕಾರ್ಯವನ್ನು ಹಿಂದೆಗೆದು ಕೊಳ್ಳುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾ.12ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.
ರಾಜ್ಯವ್ಯಾಪಿ ಸಿಎಎ ವಿರೋಧಿ ಪ್ರತಿಭಟನೆ ಸಂಘಟಿಸಿದ ಸಂಘಟಕರ ರಾಜ್ಯ ಮಟ್ಟದ ಸಭೆಯು ಬೆಂಗಳೂರಲ್ಲಿ ನಡೆದಿದ್ದು, ಈ ಸಭೆಯಲ್ಲಿ ಮಾ.12ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಎನ್‌ಪಿಆರ್ ಹಿಂದೆಗೆದು ಕೊಳ್ಳುವಂತೆ ಒತ್ತಾಯಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವ ಸಹಮತದ ನಿರ್ಧಾರ ಕೈಗೊಳ್ಳಲಾಗಿದೆ.
ಸರಕಾರದ ಸಿಎಎಗೆ ಪೂರಕವಾಗಿ ಎನ್‌ಪಿಆರ್ ಕಾರ್ಯಕ್ರಮವನ್ನು ನಡೆಸ ಲಾಗುತ್ತಿದೆ. ಕೇಂದ್ರ ಸರಕಾರವು ತಾನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ನಡೆಸುವ ಯೋಜನೆಯನ್ನು ಮಾಡಿಲ್ಲವೆಂದು ಹೇಳುತ್ತಲೇ, ಅದರ ಮೊದಲ ಹೆಜ್ಜೆಯಾದ ಎನ್‌ಪಿಆರ್‌ನ್ನು ಪ್ರಾರಂಭಿಸುತ್ತಿದೆ. ಈ ವಾಸ್ತವಿಕತೆಯನ್ನು ಮರೆ ಮಾಚಲು, ರಾಷ್ಟ್ರೀಯ ಜನಗಣತಿಗೆ ಪೂರಕವಾಗಿ ಎನ್‌ಪಿಆರ್ ನಡೆಸಲಾಗು ತ್ತಿದೆ ಎಂಬುದಾಗಿ ಪ್ರಚಾರ ಮಾಡುತ್ತಿದೆ.
ಎಪ್ರಿಲ್ ತಿಂಗಳಲ್ಲಿ ನಡೆಸಲು ಯೋಜಿಸಲಾಗಿರುವ ಎನ್‌ಪಿಆರ್, ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)-2019ನ್ನು ಅನುಷ್ಠಾನಗೊಳಿಸುವ ಪ್ರಥಮ ದಾಳಿಯಾಗಿದೆ. ಹೀಗಾಗಿ ಸಿಎಎಯನ್ನು ವಿರೋಧಿಸುವವರು ಒಗ್ಗೂಡಿ, ಎನ್‌ಪಿಆರ್‌ನ್ನು ತಡೆಯಲು ಹೋರಾಟ ಮಾಡಬೇಕಾಗಿರುವುದು ತುರ್ತು ಅಗತ್ಯವಾಗಿದೆ ಎಂದು ಸಹಬಾಳ್ವೆ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.







