ಕೊರೋನವೈರಸ್ ಸಾಂಕ್ರಾಮಿಕವಾಗಿ ಹರಡುವ ನೈಜ ಅಪಾಯ ಸನ್ನಿಹಿತ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Photo: twitter.com/WHO/photo
ಜಿನೀವ (ಸ್ವಿಟ್ಸರ್ಲ್ಯಾಂಡ್), ಮಾ. 10: ನೂತನ-ಕೊರೋನವೈರಸ್ (ಕೋವಿಡ್-19) ಕಾಯಿಲೆಯು ಬೃಹತ್ ಸಾಂಕ್ರಾಮಿಕವಾಗಿ ಹರಡುವ ‘ನೈಜ ಅಪಾಯ’ ಈಗ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ಸೋಮವಾರ ಎಚ್ಚರಿಸಿದೆ. ಆದರೆ, ಈ ವೈರಸನ್ನು ಈಗಲೂ ನಿಯಂತ್ರಿಸಬಹುದಾಗಿದೆ ಎಂದು ಅದು ಹೇಳಿದೆ.
‘‘ಮಾರಕ ಸೋಂಕು ತೀವ್ರ ಸಾಂಕ್ರಾಮಿಕ ರೋಗವಾಗಿ ಹರಡುವ ಬೆದರಿಕೆ ಈಗ ನಿಜವಾಗಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ. ‘‘ಇದು ಇತಿಹಾಸದಲ್ಲೇ ನಿಯಂತ್ರಿಸಬಹುದಾದ ಮೊದಲ ಸಾಂಕ್ರಾಮಿಕ ರೋಗ’’ ಎಂದು ಅವರು ನುಡಿದರು.
ರೋಗವನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಹಲವು ಸೂಚನೆಗಳನ್ನು ನೀಡಿದೆ. ಅವುಗಳ ಪೈಕಿ ಕೆಲವು ಇಲ್ಲಿವೆ:
►ನಿಮ್ಮ ಕೈಗಳನ್ನು ಆಗಾಗ ಆಲ್ಕೊಹಾಲ್ ಮಿಶ್ರಿತ ದ್ರಾವಣ ಅಥವಾ ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಇದು ನಿಮ್ಮ ಕೈಗಳಲ್ಲಿರಬಹುದಾದ ವೈರಸ್ಗಳನ್ನು ಕೊಲ್ಲುತ್ತದೆ.
►ಕೆಮ್ಮುವ ಹಾಗೂ ಸೀನುವ ಯಾವುದೇ ವ್ಯಕ್ತಿಗಳಿಂದ ಕನಿಷ್ಠ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಿ. ಸೋಂಕು ಪೀಡಿತ ಜನರು ಕೆಮ್ಮುವಾಗ ಅಥವಾ ಸೀನುವಾಗ ಅವರ ಬಾಯಿ ಅಥವಾ ಮೂಗಿನಿಂದ ಹಾರಬಹುದಾದ ದ್ರವದಲ್ಲಿ ವೈರಸ್ಗಳಿರುವ ಸಾಧ್ಯತೆಯಿದೆ. ನೀವು ತೀರಾ ಹತ್ತಿರದಲ್ಲಿದ್ದರೆ ನೀವು ಆ ದ್ರವದ ಬಿಂದುಗಳನ್ನು ಉಸಿರಾಡಬಹುದು ಹಾಗೂ ವೈರಸ್ ನಿಮ್ಮ ಶ್ವಾಸಕೋಶವನ್ನು ಪ್ರವೇಶಿಸಬಹುದು.
►ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ನಿವಾರಿಸಿ. ನೀವು ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೊಣಕೈಯನ್ನು ಅಥವಾ ಬಟ್ಟೆಯನ್ನು ಅಡ್ಡ ಹಿಡಿಯಿರಿ. ಬಳಿಕ ಬಟ್ಟೆಯನ್ನು ಸರಿಯಾದ ಸ್ಥಳದಲ್ಲಿ ಎಸೆಯಿರಿ.
►ಜ್ವರ, ಕೆಮ್ಮು ಮತ್ತು ಉಸಿರಾಟದಲ್ಲಿ ಸಮಸ್ಯೆಯಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಹುಷಾರಿಲ್ಲದಿದ್ದರೆ ಮನೆಯಲ್ಲೇ ಇರಿ.







