ಮೋರ್ಗನ್‌ಗೇಟ್: ಮೃತದೇಹದ ಗುರುತು ಪತ್ತೆ
ಮಂಗಳೂರು, ಮಾ.10: ನಗರದ ಮೋರ್ಗನ್ಸ್‌ಗೇಟ್ ಬಳಿ ರೈಲು ಹಳಿಯಲ್ಲಿ ರವಿವಾರ ತಡ ರಾತ್ರಿ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದೆ.
ಕೇರಳದ ಕೋಝಿಕೋಡ್ ನಿವಾಸಿ ಸುಹಾಸ್ ಮುಕುಂದನ್ (32) ಎಂಬವರ ಮೃತದೇಹ ಇದಾಗಿದೆ. ಅದರಂತೆ ಆತನ ಕುಟುಂಬಸ್ಥರು ಮಂಗಳವಾರ ನಗರಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ.
ಈ ಯುವಕ ರವಿವಾರ ರಾತ್ರಿ 11:30ರ ವೇಳೆ ನಗರದಿಂದ ಚೆನ್ನೈಗೆ ಹೊರಟ ವೆಸ್ಟ್- ಕೋಸ್ಟ್ ಎಕ್ಸ್‌ಪ್ರೆಸ್ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಸುಹಾಸ್ ಮುಕುಂದನ್ ಕೊಯಮುತ್ತೂರಿನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಓದಿದ್ದು, ಪೂನಾದಲ್ಲಿ ಉದ್ಯೋಗ ಲಭಿಸಿತ್ತು. 3 ವರ್ಷಗಳ ಹಿಂದೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದೀರ್ಘ ರಜೆ ಮಾಡಿದ ಕಾರಣ ಕೆಲಸ ಕಳೆದುಕೊಂಡಿದ್ದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸುಹಾಸ್ ಮತ್ತೆ ಪೂನಾಕ್ಕೆ ತೆರಳಿದ್ದರು. ಆದರೆ ಅದೇ ಕೆಲಸ ಸಿಕ್ಕಿರಲಿಲ್ಲ. ತನ್ನ ಜತೆಗೆ ಓದಿದವರೆಲ್ಲರೂ ಉತ್ತಮ ಉದ್ಯೋಗದಲ್ಲಿದ್ದು, ತನಗೆ ಮಾತ್ರ ಹೀಗಾಯಿತು ಎಂದು ಮಾನಸಿಕವಾಗಿ ನೊಂದುಕೊಂಡಿದ್ದರು. ಹಾಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸುಹಾಸ್ ತನ್ನ ತಂದೆಯನ್ನು ಮೊದಲೇ ಕಳೆದುಕೊಂಡಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.





