ಹಾಸನ: ಹಾಡಹಗಲೇ ಮನೆಗಳ್ಳತನ; 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಹಾಸನ, ಮಾ.10: ನಗರದ ಹೃದಯ ಭಾಗದಲ್ಲಿರುವ ಜನವಸತಿ ಭಾಗದಲ್ಲಿ ಹಾಡಹಗಲೇ ಮನೆಕಳ್ಳತನ ಮಾಡಿದ್ದು, ಮನೆ ಒಳಗಿದ್ದ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಗರ ಮತ್ತು ಸುತ್ತಮುತ್ತ ಜನತೆ ಭಯಭೀತರಾಗಿದ್ದಾರೆ.
ನಗರದ ಸ್ಲೇಟರ್ಸ್ ಮೆಮೋರಿಯಲ್ ಹಾಲ್ ಹತ್ತಿರ ರಕ್ಷಣಾಪುರಂ ರಸ್ತೆ ಬಳಿ ಕ್ರಿಶ್ಚಿಯನ್ ಚರ್ಚ್ ಹಿಂಭಾಗ ವಾಸವಾಗಿರುವ ನವೀನ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1 ಲಕ್ಷ ರೂ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಆದರೆ ಬೆಳ್ಳಿ ವಸ್ತುಗಳನ್ನು ಕಳ್ಳರು ಮುಟ್ಟಿಲ್ಲ ಎನ್ನಲಾಗಿದೆ.
ಮನೆ ಮಾಲಕ ನವೀನ್ ಕುಮಾರ್ ಮತ್ತು ಕುಟುಂಬದವರು ಬೇಲೂರು ತಾಲೂಕಿನ ಕಣದೂರಿನಲ್ಲಿ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ರಥೋತ್ಸವ ಕಾರ್ಯಕ್ರಮಕ್ಕೆ ರವಿವಾರ ಬೆಳಗ್ಗೆ ತೆರಳಿದ್ದಾರೆ. ನಂತರ ಮನೆಗೆ 3 ಗಂಟೆಗೆ ವಾಪಸ್ ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ನಗರದ ಸಮೀಪ ದೊಡ್ಡಕೊಂಡಗುಳ ರಸ್ತೆಯ ಬಳಿ ಯಡೂರಿನಲ್ಲಿ ಇದೇ ರೀತಿ ಕಬ್ಬಿಣದ ಗೇಟನ್ನು ಮುರಿದು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇನ್ನು ಜಯನಗರದಲ್ಲಿ, ಹಿಮ್ಸ್ ಆಸ್ಪತ್ರೆ ಬಳಿ ಸೇರಿದಂತೆ ನಗರದ ಸುತ್ತಮುತ್ತ ಹೆಚ್ಚು ಕಳ್ಳತನವಾದ ಬಗ್ಗೆ ವರದಿಯಾಗಿದೆ. ಅನೇಕ ಕಳ್ಳರನ್ನು ಪೊಲೀಸರು ಬಂದಿಸುತ್ತಿದ್ದರೂ ಕೂಡ ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.







