ಮಾ.12ರಂದು ಎನ್‌ಪಿಆರ್, ಎನ್‌ಆರ್‌ಸಿ ವಿರೋಧಿಸಿ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ: ಸಸಿಕಾಂತ್ ಸೆಂಥಿಲ್

ಬೆಂಗಳೂರು, ಮಾ.10: ದೇಶದ ಜನರನ್ನು ಸಂದೇಹಾಸ್ಪದ ನಾಗರಿಕರನ್ನಾಗಿ ಮಾಡಲು ಹೊರಟಿರುವ ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮಾ.12ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಮಂಗಳವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೀತಿಗಳು ಬಡ ಹಾಗೂ ಮಧ್ಯಮ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಎನ್‌ಪಿಆರ್ ಕಾಯ್ದೆಯು ಎನ್‌ಆರ್‌ಸಿಗೆ ಪೂರಕವಾಗಿದೆ. ಎ.15 ರಿಂದ ಜನರ ಗಣತಿ ಪ್ರಾರಂಭಿಸುತ್ತಾರೆ. ಹುಟ್ಟಿದ ದಾಖಲೆ ಇಲ್ಲದವರನ್ನು ಸಂದೇಹಾಸ್ಪದ ನಾಗರಿಕರ ಸಾಲಿಗೆ ಸೇರಿಸುತ್ತಾರೆ. ಸಾರ್ವಜನಿಕರಿಗೆ ಸಮಸ್ಯೆಯನ್ನುಂಟು ಮಾಡುವ ಇಂತಹ ಕಾಯ್ದೆಯ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ಎನ್‌ಆರ್‌ಸಿ ಮತ್ತು ಎನ್‌ಆರ್‌ಪಿ ಬಹಳಷ್ಟು ಲೋಪಗಳಿಂದ ಕೂಡಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಜನರಿಗೆ ತೊಂದರೆಯನ್ನುಂಟು ಮಾಡುವ ಈ ಕಾಯ್ದೆಯನ್ನು ಸಾರ್ವಜನಿಕವಾಗಿ ವಿರೋಧ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಮತ್ತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಬೆಳಗ್ಗೆ 9 ರಿಂದ 6 ವರೆಗೆ ನಡೆಸಲಿದ್ದೇವೆ. ಸತ್ಯಾಗ್ರಹದಲ್ಲಿ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ವಿನಯ್, ಗಣೇಶ್ ಶ್ರೀನಿವಾಸ್, ಜಂಟಿ ಕ್ರಿಯಾ ಸಮಿತಿಯ ಡಾ. ಆಸೀಫಾ ಉಪಸ್ಥಿತರಿದ್ದರು.







