‘ದ.ಕ.-ಕೊಡಗು: ಐತಿಹಾಸಿಕ ಸಂಬಂಧ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು, ಮಾ.10: ಕೊಡಗಿನ ಕಿತ್ತಳೆ ಈ ಮೊದಲು ವಿಶ್ವಪ್ರಸಿದ್ಧಿ ಪಡೆದಿತ್ತು. ಇದೀಗ ವಾಣಿಜ್ಯ ಬೆಳೆಗಳ ಪೈಪೋಟಿಯ ನಡುವೆ ನಶಿಸಿ ಹೋಗುತ್ತಿದೆ ಎಂದು ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ದಕ್ಷಿಣ ಕನ್ನಡ ಮತ್ತು ಕೊಡಗು: ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗಿನ ಏಲಕ್ಕಿ ಮತ್ತು ಕಾಫಿ ತೋಟಗಳ ಜತೆಗೆ ದಕ್ಷಿಣ ಕನ್ನಡದ ಜನರು ವ್ಯಾವಹಾರಿಕ ಸಂಬಂಧ ಹೊಂದಿದ್ದರು. ಮಂಗಳೂರು ಮತ್ತು ಕಾಸರಗೋಡು ಪರಿಸರದ ಜನರು ಕೂಲಿ ಕೆಲಸ ಅರಸಿ ಕಾಫಿ ತೋಟಗಳಿಗೆ ಹೋಗುತ್ತಿದ್ದರು. ಕೊಡಗಿನ ಕಿತ್ತಳೆ ವಿಶ್ವಪ್ರಸಿದ್ಧಿ ನಶಿಸುತ್ತಿದೆ. ಈ ರೀತಿಯ ಬೆಳೆಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ ಎಂದು ಡಾ.ವಿಘ್ನೇಶ್ವರ ವರ್ಮುಡಿ ಹೇಳಿದರು.
ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಮೀನಾಕ್ಷಿ ಎಂ.ಎಂ., ಇತಿಹಾಸ ಉಪನ್ಯಾಸಕ ಪ್ರಮೋದ್ ಎಂ.ಜಿ. ಹಾಗೂ ರಾಜ್ಯಶಾಸ ಉಪನ್ಯಾಸಕ ದಾಮೋದರ ಕಾಣಜಾಲು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೆಂಕಟಕೃಷ್ಣ ಭಾಗವತ ಸ್ವಾಗತಿಸಿದರು. ದಿಲೀಪ್‌ಕುಮಾರ್ ವಂದಿಸಿದರು. ಉಪನ್ಯಾಸಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







