ಸೌರಾಷ್ಟ್ರಕ್ಕೆ ಅರ್ಪಿತ್-ಪೂಜಾರ ರಕ್ಷಣೆ

ರಾಜ್‌ಕೋಟ್, ಮಾ.10: ಚೇತೇಶ್ವರ ಪೂಜಾರ ಮತ್ತು ಅರ್ಪಿತ್ ವಸವಾಡ ಐದು ಗಂಟೆಗಳ ಕಾಲ ನಡೆಸಿರುವ ರಕ್ಷಣಾತ್ಮಕ ಬ್ಯಾಟಿಂಗ್‌ನ ನೆರವಿನಲ್ಲಿ ಸೌರಾಷ್ಟ್ರ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಬಂಗಾಳ ವಿರುದ್ಧ ಉತ್ತಮ ಸ್ಥಿತಿಯಲ್ಲಿದೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಪಂದ್ಯದ ಎರಡನೇ ದಿನವಾಗಿರುವ ಮಂಗಳವಾರ ಸೌರಾಷ್ಟ್ರ ತಂಡ ದಿನದಾಟದಂತ್ಯಕ್ಕೆ 160 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟದಲ್ಲಿ 384 ರನ್ ಗಳಿಸಿದೆ.
13 ರನ್ ಗಳಿಸಿರುವ ಚಿರಾಗ್ ಜೈನ್ ಹಾಗೂ 13 ರನ್ ಗಳಿಸಿರುವ ಧಮೇಂದ್ರ ಸಿನ್ಹಾ ಜಡೇಜ ಕ್ರೀಸ್‌ನಲ್ಲಿದ್ದಾರೆ. ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 80.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 206 ರನ್ ಗಳಿಸಿದ್ದ ಸೌರಾಷ್ಟ್ರ ತಂಡ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 178 ರನ್ ಸೇರಿಸಿದೆ. 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಅರ್ಪಿತ್ ವಸವಾಡ ಮತ್ತು ಜ್ವರದಿಂದಾಗಿ 5 ರನ್ ಗಳಿಸಿ ನಿವೃತ್ತರಾಗಿದ್ದ ಚೇತೇಶ್ವರ ಪೂಜಾರ ಬ್ಯಾಟಿಂಗ್ ಮುಂದುವರಿಸಿ 6ನೇ ವಿಕೆಟ್‌ಗೆ 380 ಎಸೆತಗಳಲ್ಲಿ (79.1 ಓವರ್‌ಗಳಲ್ಲಿ ) 142 ರನ್‌ಗಳ ಜೊತೆಯಾಟ ನೀಡಿದರು. ವಸವಾಡ ಸತತ ಎರಡನೇ ಶತಕ ದಾಖಲಿಸಿದರು. ಅವರು 287 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 106 ರನ್ ದಾಖಲಿಸಿದರು. ಇದು ಈ ಆವೃತ್ತಿಯಲ್ಲಿ ಅವರ ನಾಲ್ಕನೇ ಶತಕವಾಗಿದೆ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8ನೇ ಶತಕವಾಗಿದೆ. ಗುಜರಾತ್ ವಿರುದ್ಧ ಸೆಮಿಫೈನಲ್‌ನಲ್ಲಿ ತಂಡದ ಗೆಲುವಿನಲ್ಲಿ ವಸವಾಡ ದೊಡ್ಡ ಕೊಡುಗೆ ನೀಡಿದ್ದರು.
ಪೂಜಾರ ಮತ್ತು ವಸವಾಡ ಅವರ ಇಂದಿನ ಆಟದಲ್ಲಿ 15ನೇ ಓವರ್‌ನಲ್ಲಿ ಮೊದಲ ಬೌಂಡರಿ ದಾಖಲಿಸಿದರು. ಅರ್ನಾಬ್ ನಂದಿ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ವಸವಾಡ ಅರ್ಧಶತಕ ದಾಖಲಿಸಿದರು. ಚಹಾ ವಿರಾಮಕ್ಕಿಂತ ಸ್ವಲ್ಪ ಮೊದಲು ಶತಕ ಪೂರೈಸಿದರು. 106 ರನ್ ಗಳಿಸಿದ ಅರ್ಪಿತ್ ಅವರು ಶಹಬಾಝ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. 66 ರನ್ (237 ಎಸೆತ, 5 ಬೌಂಡರಿ) ಗಳಿಸಿದ ಪೂಜಾರರನ್ನು ಮುಕೇಶ್ ಕುಮಾರ್ ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಪ್ರೇರಕ್ ಮಂಕಡ್ ಮುಕೇಶ್ ಕುಮಾರ್ ಎಸೆತದಲ್ಲಿ ಖಾತೆ ತೆರೆಯದೆ ನಿರ್ಗಮಿಸಿದರು. ಬಂಗಾಳ ತಂಡದ ಆಕಾಶ್ ದೀಪ್ 77ಕ್ಕೆ 3 ವಿಕೆಟ್, ಮುಕೇಶ್ ಕುಮಾರ್ ಮತ್ತು ಶಹಬಾಝ್ ತಲಾ 2 ವಿಕೆಟ್, ಇಶಾನ್ ಪೊರೆಲ್ ತಲಾ 1 ವಿಕೆಟ್ ಪಡೆದರು.







