ನಾಳೆಯಿಂದ ಆಲ್ ಇಂಗ್ಲೆಂಡ್ ಓಪನ್: ಭಾರತಕ್ಕೆ ಸಿಂಧು ಸಾರಥ್ಯ
ಕೊರೋನ ವೆರಸ್ ಭೀತಿಯ ಮಧ್ಯೆಯೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಟೂರ್ನಿ

ಬರ್ಮಿಂಗ್‌ಹ್ಯಾಮ್,ಮಾ.10: ಮಾರಣಾಂತಿಕ ಕೊರೋನ ವೈರಸ್ ಭೀತಿಯ ನಡುವೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬುಧವಾರ ಇಲ್ಲಿ ಆರಂಭವಾಗಲಿದೆ. ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ಭಾರತದ ಸವಾಲನ್ನು ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ. ಕಠಿಣ ಡ್ರಾ ಎದುರಿಸುತ್ತಿರುವ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರ ಟೋಕಿಯೊ ಒಲಿಂಪಿಕ್ಸ್ ರೇಸ್ ಕೂಡ ಸಂಕೀರ್ಣ ಸ್ಥಿತಿಯಲ್ಲಿದೆ.
4,000ಕ್ಕೂ ಅಧಿಕ ಜನರ ಬಲಿ ಪಡೆದಿರುವ, 1 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗಲಿರುವ ಕೊರೋನ ವೈರಸ್‌ನ ಭಾರೀ ಭೀತಿಯ ನಡುವೆ ವರ್ಷದ ಮೊದಲ ಸೂಪರ್ 1000 ಸ್ಪರ್ಧೆಯು ನಡೆಯುತ್ತಿದೆ. ಕೊರೋನಕ್ಕೆ ಇಂಗ್ಲೆಂಡ್‌ನಲ್ಲಿ ಈ ತನಕ ಐವರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ. ಚೀನಾದಲ್ಲಿ ಮೊದಲಿಗೆ ಕೊರೋನ ವೈರಸ್ ಪತ್ತೆಯಾದ ಬಳಿಕ ಜರ್ಮನ್ ಓಪನ್ ಸಹಿತ ಹಲವು ಟೂರ್ನಿಗಳು ರದ್ದಾಗಿವೆ. ಟೋಕಿಯೊ ಒಲಿಂಪಿಕ್ಸ್ ತಯಾರಿಗೆ ಈ ವೈರಸ್ ಪರಿಣಾಮಬೀರುತ್ತಿದೆ. ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಾಜಿ ಅಗ್ರ-10ನೇ ಆಟಗಾರ ಎಚ್‌ಎಸ್ ಪ್ರಣಯ್ ಹಾಗೂ ವಿಶ್ವದ ನಂ.10ನೇ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಸಹಿತ ಭಾರತದ ಏಳು ಶಟ್ಲರ್‌ಗಳು ಆಲ್ ಇಂಗ್ಲೆಂಡ್‌ನಿಂದ ಹಿಂದೆ ಸರಿದಿದ್ದಾರೆ. 1,100,000 ಬಹುಮಾನ ಮೊತ್ತದ ಬಿಡಬ್ಲುಎಫ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಜೇತರಿಗೆ 12,000 ಪಾಯಿಂಟ್ಸ್ ಲಭ್ಯವಾಗಲಿದೆ. ಒಲಿಂಪಿಕ್ಸ್ ಕ್ವಾಲಿಫಿಕೇಶನ್‌ನಿಂದಾಗಿ ಹೆಚ್ಚಿನ ಅಗ್ರ ಆಟಗಾರರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಈಗಾಗಲೇ ಒಲಿಂಪಿಕ್ಸ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿರುವ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸುಮಾರು ಎರಡು ದಶಕಗಳಿಂದ ಭಾರತ ಎದುರಿಸುತ್ತಿರುವ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸ ಮೂಡಿಸಿದ್ದಾರೆ. ಸೈನಾ ಹಾಗೂ ಶ್ರೀಕಾಂತ್ ಉಪಯುಕ್ತ ಪಾಯಿಂಟ್ಸ್ ಪಡೆದು ಎಪ್ರಿಲ್ 28ರೊಳಗೆ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಈ ಟೂರ್ನಿ ಅತ್ಯಂತ ಮುಖ್ಯವಾಗಿದೆ.
ಶ್ರೇಯಾಂಕರಹಿತ ಸೈನಾ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಸೈನಾ 2015ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಫೈನಲ್ ತಲುಪಿದ್ದರು.
ಮಾಜಿ ನಂ.1 ಆಟಗಾರ ಶ್ರೀಕಾಂತ್ ಚೀನಾದ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಚೆನ್‌ರಿಂದ ಆರಂಭದಲ್ಲಿ ಕಠಿಣ ಸವಾಲು ಎದುರಿಸಲಿರುವ ಶ್ರೀಕಾಂತ್ 2019ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.
110ನೇ ಆವೃತ್ತಿಯ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮೇಲೆ ಹಲವು ಅಂತರ್‌ರಾಷ್ಟ್ರೀಯ ಟೂರ್ನಿಗಳು ರದ್ದಾಗುವಂತೆ ಮಾಡಿದ್ದ ಕೊರೋನ ವೈರಸ್ ಪಿಡುಗು ಕಾಡುತ್ತಿದೆ. ಬುಧವಾರದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಟೂರ್ನಿಯು ನಿಗದಿಯಂತೆಯೇ ನಡೆಯಲಿದೆ ಎಂದು ಆಯೋಜಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ತಮ್ಮ ರ್ಯಾಂಕಿಂಗ್‌ನ್ನು ಸುಧಾರಿಸಿಕೊಳ್ಳಲು ಪರದಾಡುತ್ತಿರುವ ಭಾರತದ ಶಟ್ಲರ್‌ಗಳಿಗೆ ಟೂರ್ನಿಯು ನಿಗದಿಯಂತೆ ನಡೆಯುತ್ತಿರುವುದು ಶುಭ ಸುದ್ದಿಯಾಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಎಪ್ರಿಲ್ ಅಂತ್ಯದ ವೇಳೆ ರ್ಯಾಂಕಿಂಗ್‌ನ್ನು ಉತ್ತಮಪಡಿಸಿಕೊಳ್ಳಬೇಕಾದ ಕಠಿಣ ಗುರಿ ಸೈನಾ ಹಾಗೂ ಶ್ರೀಕಾಂತ್ ಮುಂದಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿರುವ ಸೈನಾ ಹಾಗೂ ಶ್ರೀಕಾಂತ್ ಪ್ರಸ್ತುತ ಕ್ರಮವಾಗಿ 22ನೇ ಹಾಗೂ 21ನೇ ಸ್ಥಾನದಲ್ಲಿದ್ದಾರೆ. ಎಪ್ರಿಲ್ ಅಂತ್ಯದ ವೇಳೆಗೆ ಈ ಇಬ್ಬರು ಅಗ್ರ-16ರೊಳಗೆ ಸ್ಥಾನ ಪಡೆದರೆ ಒಲಿಂಪಿಕ್ಸ್ ಗೆ ತೇರ್ಗಡೆಯಾಗುತ್ತಾರೆ. ಒಲಿಂಪಿಕ್ಸ್ ಅರ್ಹತೆ ವಿಚಾರದಲ್ಲಿ ಶ್ರೀಕಾಂತ್‌ಗಿಂತ ಸೈನಾಗೆ ಉತ್ತಮ ಅವಕಾಶವಿದೆ.
ಒಂದು ವೇಳೆ ಸೈನಾ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಯಾವುದೇ ಪಾಯಿಂಟ್ಸ್ ಪಡೆಯದೇ ಇದ್ದರೆ, ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಇಂಡಿಯಾ ಓಪನ್‌ನಲ್ಲಿ ಸಾಕಷ್ಟು ಅಂಕ ಪಡೆಯಬಹುದಾಗಿದೆ. ಕಳೆದ ವರ್ಷ ಇಂಡಿಯಾ ಓಪನ್‌ನಲ್ಲಿ ಫೈನಲ್ ತಲುಪಿದ್ದ ಶ್ರೀಕಾಂತ್ ಹಾದಿ ಸುಲಭವಾಗಿಲ್ಲ. ಅವರು 7,800 ಅಂಕವನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಾಗಿದೆ.
ಒಂದು ವೇಳೆ ಸೈನಾ ಅವರು ಮೊದಲ ಸುತ್ತಿನಲ್ಲಿ ಯಮಗುಚಿಯವರನ್ನು ಸೋಲಿಸಿದರೆ, ಎರಡನೇ ಸುತ್ತಿನಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ್ತಿ ಸಯಕಾ ತಕಹಶಿ ಅವರನ್ನು ಎದುರಿಸಬೇಕಾಗುತ್ತದೆ. ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್, ಸ್ಪೇನ್‌ನ ಕರೊಲಿನಾ ಮರಿನ್ ಸವಾಲು ಎದುರಾಗುವ ಸಾಧ್ಯತೆಯಿದೆ.
ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅಮೆರಿಕದ ಬೆವೆನ್ ಝಾಂಗ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು ಎದುರಿಸುವ ನಿರೀಕ್ಷೆಯಿದೆ. ಒಂದು ವೇಳೆ ಸಿಂಧು ಅವರು ಒಕುಹರಾರನ್ನು ಸೋಲಿಸಿದರೆ, ಚೆನ್ ಯು ಫೀ ಅವರನ್ನು ಎದುರಿಸಬೇಕಾಗಬಹುದು. ಚೀನಾದ ಶಟ್ಲರ್ ಚೆನ್ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಸಿಂಧು ಆಲ್ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನದಲ್ಲಿದ್ದಾರೆ. ವಿಶ್ವದ ನಂ.6ನೇ ಆಟಗಾರ್ತಿ ಸಿಂಧು 2018ರಲ್ಲಿ ಸೆಮಿ ಫೈನಲ್ ತಲುಪಿದ್ದರು.
ಮತ್ತೊಂದೆಡೆ, ಶ್ರೀಕಾಂತ್‌ಗೆ ಕಠಿಣ ಸವಾಲು ಎದುರಾಗಿದ್ದು, ಚೆನ್ ಲಾಂಗ್‌ರನ್ನು ಸೋಲಿಸುವುದು ಸುಲಭ ಸಾಧ್ಯವಲ್ಲ. ಭಾರತದ ಇನ್ನೋರ್ವ ಸಿಂಗಲ್ಸ್ ಆಟಗಾರ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ, ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಚೀನಾದ ಝಾವೊ ಜುನ್ ಪೆಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಐದು ಪ್ರಶಸ್ತಿಗಳನ್ನು ಜಯಿಸಿದ್ದ ಯುವ ಆಟಗಾರ ಲಕ್ಷ ಸೇನ್ ಮೊದಲ ಬಾರಿ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುತ್ತಿದ್ದು, ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ಲೀ ಚೆವುಕ್‌ರನ್ನು ಮುಖಾಮುಖಿಯಾಗಲಿದ್ದಾರೆ.
ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಕಳೆದ ತಿಂಗಳು ಸ್ಪೇನ್ ಮಾಸ್ಟರ್ಸ್ ವೇಳೆ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಮೊದಲ ಸುತ್ತಿನಲ್ಲಿ ಇಂಡೋನೇಶ್ಯದ ಶೆಸಾರ್ ಹಿರೆನ್‌ರನ್ನು ಎದುರಿಸಲಿದ್ದಾರೆ.
ಭಾರತದ ಐವರು ಬ್ಯಾಡ್ಮಿಂಟನ್ ಆಟಗಾರರಾದ-ಎಚ್.ಎಸ್. ಪ್ರಣಯ್,ಸಮೀರ್ ವರ್ಮಾ, ಸೌರಭ್ ವರ್ಮಾ, ಸಾತ್ವಿಕ್, ಚಿರಾಗ್, ಮನು ಅತ್ರಿ, ಸುಮೀತ್ ರೆಡ್ಡಿ ಕೊರೋನ ವೈರಸ್ ಭೀತಿಯಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಎಲ್ಲ ಆಟಗಾರರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಪುರುಷರ ಡಬಲ್ಸ್‌ನಲ್ಲಿ ಭಾರತದ ಯಾವ ಆಟಗಾರನೂ ಸ್ಪರ್ಧಿಸುತ್ತಿಲ್ಲ.
ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಹಾಗೂ ಸಂಜನಾ ಸಂತೋಷ್ ಹಾಗೂ ಪೂಜಾ ದಾಂಡು ಮಹಿಳೆಯರ ಡಬಲ್ಸ್ ವಿಭಾಗದಲ್ಲಿದ್ದಾರೆ. ಮಿಕ್ಸೆಡ್ ಡಬಲ್ಸ್‌ನಲ್ಲಿ ಸಿಕ್ಕಿ ಹಾಗೂ ಪ್ರಣವ್ ಜೆರ್ರಿ ಚೋಪ್ರಾ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಝೆಂಗ್ ಸಿ ವೀ ಹಾಗೂ ಹ್ವಾಂಗ್ ಯಾ ಕ್ಯೂಯಾಂಗ್‌ರನ್ನು ಎದುರಿಸಲಿದ್ದಾರೆ.
2001ರಲ್ಲಿ ರಾಷ್ಟ್ರೀಯ ಕೋಚ್ ಪುಲ್ಲೆಲ ಗೋಪಿಚಂದ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ ಭಾರತದ ಕೊನೆಯ ಆಟಗಾರ. ಈ ವರ್ಷ ಭಾರತದ ಇನ್ನೋರ್ವ ಅಟಗಾರ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೋ?ಎಂದು ಕಾದುನೋಡ ಬೇಕಾಗಿದೆ.







