ಕೊಡಗಿನ ಹೋಮ್‌ಮೇಡ್ ಚಾಕಲೇಟ್‌ಗಳು ಸುರಕ್ಷಿತ: ಸಚಿವ ಬಿ.ಶ್ರೀರಾಮುಲು

ಮಡಿಕೇರಿ, ಮಾ.10: ಕೊಡಗಿನಲ್ಲಿ ಮಾರಾಟವಾಗುತ್ತಿರುವ ಬಹುತೇಕ ಹೋಮ್‌ಮೇಡ್ ಚಾಕಲೇಟ್‌ಗಳು ಸುರಕ್ಷಿತ ಎಂದು ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯ ದೃಢಪಡಿಸಿದ್ದು, ಎರಡು ಮಾದರಿಗಳನ್ನು ಮಾತ್ರ ಸಂಪೂರ್ಣ ಲೇಬಲ್ ಮಾಹಿತಿ ನಮೂದಿಸದೇ ಇರುವ ಕಾರಣಕ್ಕೆ ‘ಮಿಸ್ ಬ್ರಾಂಡೆಡ್’ ಎಂದು ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವಿಧಾನ ಮಂಡಲದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಡಗು ಜಿಲ್ಲೆಯಲ್ಲಿ ಹೋಮ್‌ಮೇಡ್ ಚಾಕ ಲೇಟ್ ಸೇರಿದಂತೆ ಎಲ್ಲಾ ಬಗೆಯ ಆಹಾರ ಪದಾರ್ಥಗಳ ಮಾರಾಟದ ಬಗ್ಗೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಹಾರ ಸುರಕ್ಷತಾಧಿಕಾರಿಗಳು ಹಾಗೂ ಅಂಕಿತಾಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆಹಾರ ಪರವಾನಿಗೆ ಪಡೆದುಕೊಳ್ಳುವುದು, ಉತ್ತಮ ಗುಣಮಟ್ಟದ ಸುರಕ್ಷಿತ ಹೋಮ್‌ಮೇಡ್ ಚಾಕಲೇಟ್ ಹಾಗೂ ಇತರ ಆಹಾರ ಪದಾರ್ಥಗಳ ಮಾರಾಟದ ಬಗ್ಗೆ ತಯಾರಕರು ಹಾಗೂ ಸಂಬಂಧಿಸಿದ ಮಾರಾಟಗಾರರಿಗೆ ಕಾಯ್ದೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
2019ರ ಜನವರಿಯಿಂದ ಪ್ರಸಕ್ತ ಸಾಲಿನ ಜನವರಿವರೆಗೆ ಕೊಡಗು ಜಿಲ್ಲೆಯಲ್ಲಿ 17 ಹೋಮ್‌ಮೇಡ್ ಚಾಕಲೇಟ್‌ಗಳ ಕಾನೂನಾತ್ಮಕ ಆಹಾರ ಮಾದರಿಗಳನ್ನು ವಿವಿಧೆಡೆಗಳಿಂದ ಸಂಗ್ರಹಿಸಿ ಹೆಚ್ಚಿನ ವಿಶ್ಲೇಷಣೆಗೆ ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಈ ಪೈಕಿ 15 ಹೋಮ್‌ಮೇಡ್ ಚಾಕಲೇಟ್ ಆಹಾರ ಮಾದರಿಗಳು ಸುರಕ್ಷಿತ ಎಂದು ವರದಿಯಾಗಿವೆ. ಉಳಿದ 2 ಮಾದರಿಗಳಲ್ಲಿ ಸಂಪೂರ್ಣ ಲೇಬಲ್ ಮಾಹಿತಿ ಇಲ್ಲದಿರುವುದರಿಂದ ಮಿಸ್ ಬ್ರಾಂಡೆಡ್ ಎಂದು ವರದಿಯಾಗಿದ್ದು, ಇಂತಹ ಪ್ರಕರಣಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ ನಿಬಂಧನೆಗಳು 2011ರ ಅಡಿಯಲ್ಲಿ ನೋಟಿಸ್ ಹಾಗೂ ದಂಡ ವಿಧಿಸುವ ಅವಕಾಶವಿದ್ದು, ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಯಾವುದೇ ಅನುಮಾನಾಸ್ಪದ (ನಕಲಿ) ಆಹಾರ ಉತ್ಪನ್ನಗಳು ಕಂಡು ಬಂದಲ್ಲಿ ಅಂತಹ ಆಹಾರ ಮಾದರಿಗಳನ್ನು ಆಹಾರ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಿ ವರದಿ ಬಂದ ನಂತರ ಮಾದರಿಯು ಸಬ್‌ಸ್ಟಾಂಡರ್ಡ್ ಎಂದು ಕಂಡು ಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 51ರ ಪ್ರಕಾರ ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು, ಆಹಾರ ಮಾದರಿ ಮಿಸ್ ಬ್ರಾಂಡೆಡ್ ಎಂದು ಕಂಡು ಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್ 52ರ ಅನ್ವಯ ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಹಾಗೂ ಆಹಾರ ಮಾದರಿ ಅನ್‌ಸೇಫ್ ಎಂದು ಕಂಡು ಬಂದಲ್ಲಿ ಸೆಕ್ಷನ್ 59ರ ಪ್ರಕಾರ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.







