ಗಾಯಾಳುವಿಗೆ ಆರ್ಥಿಕ ನೆರವು ನೀಡುವಿರಾ ?

ಉಳ್ಳಾಲ: ಮೂರು ದಿನಗಳ ಹಿಂದೆ ಮಂಗಳೂರಿನ ನಡುಮೊಗರ್ ಬಳಿ ಬೈಕ್ ಗೆ ಕಾರೊಂದು ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಮಧ್ಯೆ ಇವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದಾನಿಗಳ ನೆರವನ್ನು ಕೋರುತ್ತಿದೆ.
ಮಂಗಳೂರು ಹೊರವಲಯದ ಕಲ್ಲಾಪು ಪೆರ್ಮನ್ನೂರು ಗ್ರಾಮದ ಅಂಬೋಡಿ ನಿವಾಸಿ ಹರೀಶ್ಚಂದ್ರ ಅವರ ಪುತ್ರ ನರೇಶ್ ನಾಯಕ್ (21) ತೀವ್ರ ಸ್ವರೂಪದ ಗಾಯಗೊಂಡು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾ.7 ರಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕೆಲಸ ಮುಗಿಸಿ ತನ್ನ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ನಡುಮೊಗರು ಬಳಿ ಕಾರೊಂದು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸವಾರ ನರೇಶ್ ಒಂದಷ್ಟು ದೂರ ಎಸೆಯಲ್ಪಟ್ಟು, ತಲೆ, ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮನೆಗೆ ಆದಾರಸ್ತಂಭ: ಗಾಯಾಳು ನರೇಶ್ ನಾಯಕ್ ತೀರಾ ಬಡ ಕುಟುಂಬವಾಗಿದ್ದು, ಮನೆಗೆ ಈತನೇ ಆಧಾರಸ್ತಂಭವಾಗಿದ್ದಾರೆ. ಸೆಂಟ್ರಿಂಗ್ ಕೆಲಸ ಮಾಡುವ ನರೇಶ್ ಒಬ್ಬನೇ ಮಗನಾಗಿದ್ದು, ಈತನ ಈ ಸ್ಥಿತಿಯಿಂದ ಕುಟುಂಬ ಇದೀಗ ಕಂಗಾಲಾಗಿದೆ. ಹಣದ ವ್ಯವಸ್ಥೆಯು ಇಲ್ಲದೆ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಗಾಯಾಳು ನರೇಶ್ ಗೆ ಇಂಡಿಯಾನ ಆಸ್ಪತ್ರೆಯಲ್ಲಿ ಮಾಡಲಾದ ಶಸ್ತ್ರ ಚಿಕಿತ್ಸೆಗೆ ಸುಮಾರು 6 ಲಕ್ಷ ಖರ್ಚು ತಗಲಲಿದೆ ಎಂದು ಗಾಯಾಳುವಿನ ಕುಟುಂಬ ಮೂಲಗಳು ತಿಳಿಸಿವೆ.
ಇಷ್ಟೊಂದು ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿಲ್ಲದ ನರೇಶ್ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಇವರ ಬಳಿ ಸ್ವಂತ ಬ್ಯಾಂಕ್ ಖಾತೆ ಇಲ್ಲದಿದ್ದು, ಸಹಾಯ ಮಾಡಲಿಚ್ಚಿಸುವ ಉದಾರ ದಾನಿಗಳು ಈ ಕೆಳಗೆ ನೀಡಲಾದ ಬ್ಯಾಂಕ್ ಖಾತೆಗೆ ಆರ್ಥಿಕ ನೆರವನ್ನು ಒದಗಿಸುವಂತೆ ವಿನಂತಿಸಲಾಗಿದೆ.
ಮನವಿ: ತೀರಾ ಬಡಕುಟುಂಬವಾಗಿರುವ ಗಾಯಾಳು ನರೇಶ್ ನಾಯಕ್ ಅವರಿಗೆ ಉದಾರ ದಾನಿಗಳು ಆರ್ಥಿಕ ನೆರವು ನೀಡಿ ಸಹಕರಿಸುವಂತೆ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಮನವಿ ಮಾಡಿದ್ದಾರೆ.
ಬ್ಯಾಂಕ್ ಖಾತೆ ವಿವರ: ಸುಚೀತಾ, ಬ್ಯಾಂಕ್ ಆಫ್ ಮಹರಾಷ್ಟ್ರ,ಮಂಗಳೂರು ಶಾಖೆ, ಖಾತೆ ನಂಬರ್:- 68012649208
ಐ ಎಫ್ ಎಸ್ ಸಿ ಕೋಡ್ ನಂಬರ್ ಎಂಎಎಚ್ ಬಿ0000381







