ಮಸೀದಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಇಬ್ಬರು ಸಂಘಪರಿವಾರ ಕಾರ್ಯಕರ್ತರ ಬಂಧನ

ಕೊಯಂಬತ್ತೂರು: ನಗರದ ವೇಧಂಬಲ್ ನಗರ್ ಪ್ರದೇಶದಲ್ಲಿರುವ ಹಿದಾಯತುಲ್ ಸುನ್ನತ್ ಜಮಾಅತ್ ಮಸೀದಿಯ ಗೇಟಿನ ಮುಂಭಾಗ ಪೆಟ್ರೋಲ್ ಬಾಂಬ್ ಗಳನ್ನು ಎಸೆದ ಆರೋಪದ ಮೇಲೆ ಕೊಯಂಬತ್ತೂರು ಪೊಲೀಸರು ಇಬ್ಬರು ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಘಟನೆ ಮಾರ್ಚ್ 5ರಂದು ಬೆಳಗ್ಗಿನ ಜಾವ ಒಂದು ಗಂಟೆಗೆ ನಡೆದಿದೆ. ಆದರೆ ಅದೃಷ್ಟವಶಾತ್ ಬಾಂಬ್ ಸ್ಫೋಟಿಸದೇ ಇದ್ದುದರಿಂದ ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿರಲಿಲ್ಲ.
ಜಮಾತ್ ಕಾರ್ಯದರ್ಶಿ ದೂರು ನೀಡಿದ ನಂತರ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ರತ್ನಪುರಿ ಪ್ರದೇಶದಿಂದ ಬಿಜೆಪಿ ಸದಸ್ಯ ಪಾಂಡಿ (41) ಹಾಗೂ ವಿಹಿಂಪ ಸದಸ್ಯ ಅಖಿಲ್ (23) ಎಂಬಿಬ್ಬರನ್ನು ಬಂಧಿಸಲಾಗಿದೆ.
ಹಿಂದು ಮುನ್ನಣಿ ಪದಾಧಿಕಾರಿ ಆನಂದ್ ಎಂಬವರ ಮೇಲೆ ಕೆಲ ದಿನಗಳ ಹಿಂದೆ ನಡೆದ ದಾಳಿಗೆ ಪ್ರತೀಕಾರವಾಗಿ ತಾವು ಮಸೀದಿಯತ್ತ ಪೆಟ್ರೋಲ್ ಬಾಂಬ್ ಎಸೆದಿದ್ದಾಗಿ ಅವರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಮಾರ್ಚ್ 4ರಂದು ಹಿಂದು ಮುನ್ನಣಿಯ ಜಿಲ್ಲಾ ಕಾರ್ಯದರ್ಶಿ ಮಡುಕ್ಕರೈ ಆನಂದ್ ಬಿಜೆಪಿ ಆಯೋಜಿಸಿದ್ದ ಸಿಎಎ ಪರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಅವರ ಮೇಲೆ ರಾಡ್‍ಗಳಿಂದ ದಾಳಿ ನಡೆಸಿದ್ದರು. ತಲೆಗೆ ತೀವ್ರ ಗಾಯಗಳೊಂದಿಗೆ ಆನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.







