ಆಡಳಿತ-ವಿಪಕ್ಷಗಳ ಬಿಗಿಪಟ್ಟು: 'ಅಮಾನತು', 'ಹಕ್ಕುಚ್ಯುತಿ'ಯ ಗದ್ದಲಕ್ಕೆ ಕಲಾಪ ಬಲಿ

ಬೆಂಗಳೂರು, ಮಾ. 11: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಡಾ.ಸುಧಾಕರ್ ನಡುವಿನ ಬೈಗುಳ ವಿಚಾರ ಸಂಬಂಧ ‘ಹಕ್ಕುಚ್ಯುತಿ’ ಮಂಡನೆಗೆ ಕಾಂಗ್ರೆಸ್ ಅವಕಾಶ ಕೋರಿದರೆ, ರಮೇಶ್ ಕುಮಾರ್ ಅಮಾನತ್ತಿಗೆ ಬಿಜೆಪಿ ಆಗ್ರಹಿಸಿ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ದಿನದ ಕಲಾಪ ಬಲಿಯಾಯಿತು.
ಬುಧವಾರ ಬೆಳಗ್ಗೆ 11:10ಕ್ಕೆ ವಿಧಾನಸಭೆ ಕಲಾಪ ಆರಂಭವಾಯಿತು. ಈ ವೇಳೆ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಸಚಿವ ಸುಧಾಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದು, ಕೂಡಲೇ ಅವರ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವವನ್ನು ನೀಡಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಕೋರಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಸಚಿವರ ವಿರುದ್ಧ ಹಿರಿಯರಾದ ರಮೇಶ್ ಕುಮಾರ್ ಅವರು ಕೀಳುಮಟ್ಟದ ಅಶ್ಲೀಲ ಪದ ಬಳಕೆ ಮಾಡಿದ್ದು, ಕೂಡಲೇ ಅವರನ್ನು ಸದನದಿಂದ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಗದ್ದಲ-ಕೋಲಾಹಲ ಸೃಷ್ಟಿಯಾಯಿತು.
‘ಹಕ್ಕುಚ್ಯುತಿ ಸಂಬಂಧ ಎರಡು ಕಡೆಯಿಂದಲೂ ಸೂಚನಾ ಪತ್ರ ಬಂದಿದೆ. ಸಿದ್ದರಾಮಯ್ಯನವರೂ ಪ್ರಸ್ತಾವ ಕಳುಹಿಸಿದ್ದಾರೆ. ಸುಧಾಕರ್ ಕೂಡ ಪತ್ರ ಕಳುಹಿಸಿದ್ದಾರೆ. ನಿಯಮಾವಳಿ ಪ್ರಕಾರ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಅವಕಾಶ ಕಲ್ಪಿಸಬೇಕು. ಮೊದಲು ಪ್ರಶ್ನೋತ್ತರ ನಡೆಯಲಿ. ಅನಂತರ ಚರ್ಚೆಗೆ ಅವಕಾಶ ನೀಡುತ್ತೇನೆ’ ಎಂದು ಸ್ಪೀಕರ್ ರೂಲಿಂಗ್ ನೀಡಿ ಸಮಾಧಾನಪಡಿಸಲು ಪ್ರಯತ್ನ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಿಯಮಾವಳಿ ಪ್ರಕಾರ ಪ್ರಶ್ನೋತ್ತರದ ಬಳಿಕ ಹಕ್ಕುಚ್ಯುತಿ ಚರ್ಚೆಗೆ ಅವಕಾಶ ನೀಡುವುದಾದರೆ ನಮ್ಮ ಸಹಮತವಿದೆ. ಆದರೆ ನಿನ್ನೆಯೇ ನಾನು ಪ್ರಸ್ತಾವ ಕಳುಹಿಸಿದ್ದೇನೆ. ಹೀಗಾಗಿ ಮೊದಲು ನನಗೆ ಅವಕಾಶ ನೀಡಿ’ ಎಂದು ಕೋರಿದರು.
ಆದರೆ, ಆಡಳಿತಾರೂಢ ಬಿಜೆಪಿಯ ಶಾಸಕರು ಎದ್ದುನಿಂತು, ‘ರಮೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕು. ನಿನ್ನೆ ವೀರಾವೇಷ ತೋರಿಸಿದ ರಮೇಶ್ ಕುಮಾರ್ ಇಂದು ಸದನಕ್ಕೆ ಹಾಜರಾಗದೆ ಪಲಾಯನ ಮಾಡಿದ್ದಾರೆ. ಅವರು ಎಲ್ಲೇ ಇದ್ದರೂ ಹುಡುಕಿ ತಂದು ಅಮಾನತು ಮಾಡಿ’ ಎಂದು ಪಟ್ಟು ಹಿಡಿದರು.
ಈ ವೇಳೆ ಎದ್ದುನಿಂತ ಸಿದ್ದರಾಮಯ್ಯ, ‘ಇವರಿಗೆ(ಆಡಳಿತ ಪಕ್ಷ) ಜವಾಬ್ದಾರಿ ಇದೆಯೇ? ರಾಜ್ಯದ ಸಮಸ್ಯೆಗಳ ಚರ್ಚೆಗೆ ಅಧಿವೇಶನ ಕರೆದಿದ್ದು, ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ. ಅಧಿವೇಶನ ನಡೆಯುವುದು ಇವರಿಗೆ ಬೇಕಿಲ್ಲ’ ಎಂದು ತಿರುಗೇಟು ನೀಡಿದರು.
ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಮನವಿಗೆ ಆಡಳಿತಾರೂಢ ಬಿಜೆಪಿಯ ಸದಸ್ಯರೇ ಸಹಕಾರ ನೀಡದ ಹಿನ್ನೆಲೆಯಲ್ಲಿ 15 ನಿಮಿಷಗಳ ಸದನವನ್ನು ಮುಂದೂಡಿದರು. ಅನಂತರ ಕಾಂಗ್ರೆಸ್ಸಿನ ಝಮೀರ್ ಅಹ್ಮದ್ ಖಾನ್ ಮತ್ತು ಸಚಿವ ಬೈರತಿ ಬಸವರಾಜ್ ನಡುವೆ ವಾಗ್ವಾದ ನಡೆಯಿತು.
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಲಾಪ ಮತ್ತೆ ಸೇರಿತು. ಹಕ್ಕುಚ್ಯುತಿ ಪ್ರಸ್ತಾವ ಕುರಿತು ಚರ್ಚೆಗೆ ಕಾಂಗ್ರೆಸ್ ಆಗ್ರಹಿಸಿದರೆ, ರಮೇಶ್ ಕುಮಾರ್ ಅಮಾನತ್ತಿಗೆ ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಎರಡೇ ನಿಮಿಷದಲ್ಲೆ ಸ್ಪೀಕರ್ ಮಧ್ಯಾಹ್ನ 3ಗಂಟೆಗೆ ಕಲಾಪ ಮುಂದೂಡಿದರು.
ಮಧ್ಯಾಹ್ನ 3.45ಕ್ಕೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಹಕ್ಕುಚ್ಯುತಿ ಕುರಿತು ನೀಡಿರುವ ನೋಟಿಸ್ ಮೇಲೆ ಚರ್ಚೆ ನಡೆಸಲು ಆಹ್ವಾನಿಸಿದರು. ಈ ವೇಳೆ ಸಚಿವ ಸುಧಾಕರ್ ಎದ್ದು ನಿಂತು ನಾನು ನಿನ್ನೆ ಮಾಡಿದ ಭಾಷಣ ಪೂರ್ಣಗೊಂಡಿಲ್ಲ. ಅದು ಹಕ್ಕುಚ್ಯುತಿ ಹೇಗಾಗುತ್ತದೆ? ನನಗೆ ಭಾಷಣ ಮುಗಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸಹಕಾರ ನೀಡಿದರು.
ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಆಗ ಸದನವನ್ನು 4 ಗಂಟೆಗೆ ಸೇರುವಂತೆ ಸ್ಪೀಕರ್ ಮುಂದೂಡಿದರು. ಈ ವೇಳೆ ಮುಖ್ಯಮಂತ್ರಿ, ಹಿರಿಯ ಸಚಿವರು ಹಾಗೂ ವಿರೋಧ ಪಕ್ಷದ ಪ್ರಮುಖರನ್ನು ಕರೆಸಿ ಸ್ಪೀಕರ್ ಸಂಧಾನ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ.
ಪುನಃ 5.15ಕ್ಕೆ ಸದನ ಸೇರುತ್ತಿದ್ದಂತೆ ಅದೇ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ವಿರೋಧ ಪಕ್ಷದ ನಾಯಕರು ಮಾತನಾಡಲು ನೀವು ಆಹ್ವಾನ ಕೊಟ್ಟಿದ್ದೀರಾ, ಅವರ ಮಾತು ಮುಗಿದ ಬಳಿಕ ಸುಧಾಕರ್ ಮಾತನಾಡಲಿ ಎಂದು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು. ಈ ವೇಳೆ ಪುನಃ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ, ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸೇರುವಂತೆ ಸ್ಪೀಕರ್ ಮುಂದೂಡಿದರು.







