ಕೊರೋನ ಪತ್ತೆ ಮಾಡುವ ಥರ್ಮಲ್ ಸ್ಕ್ಯಾನಿಂಗ್ ಜಿಲ್ಲೆಯ 7 ಸ್ಥಳಗಳಲ್ಲಿ ಬಳಕೆ: ಕಾರವಾರ ಡಿಸಿ

ಕಾರವಾರ: ಕೊರೋನ ವೈರಸ್ ಸೊಂಕು ಪತ್ತೆ ಮಾಡುವ ಅತ್ಯಾಧುನಿಕ ಥರ್ಮಲ್ ಸ್ಕ್ಯಾನಿಂಗ್ ಉಪಕರಣ ಜಿಲ್ಲೆಯ ಏಳು ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಬಳಕೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ತಿಳಿಸಿದ್ದಾರೆ.
ಈಗಾಗಲೇ ಥರ್ಮಲ್ ಸ್ಕ್ಯಾನರ್ ಸಾಧನವನ್ನು ಕಾರವಾರ, ಕಾರವಾರ ಬಂದರು, ಗೋಕರ್ಣ, ಮುರುಡೇಶ್ವರ, ಶಿರಸಿ, ಮುಂಡಗೋಡ ಹಾಗೂ ದಾಂಡೇಲಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಉಪಕರಣ ಮಾನವನ ಚರ್ಮದ ಮೇಲ್ಮೆ ತಾಪಮಾನ ದಾಖಲಿಸಲು ಉಪಯೋಗಿಸಲಾಗುವುದು.
ಜಿಲ್ಲೆಯ ಗೋಕರ್ಣ ಹಾಗೂ ಮುಂಡಗೋಡದ ಟಿಬೇಟಿಯನ್ ಕಾಲೋನಿಗೆ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರು ತಂಡ ರಚಿಸಿಕೊಂಡು ಪ್ರತಿ ಮನೆ ಮನೆಗೆ ಭೇಟಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ, ಹಾಗೂ ಜಮರನ್ನು ವಿಶ್ವಾಸಕ್ಕೆ ಪಡೆದು ಸ್ಥಳೀಯರು ಹಾಗೂ ವಿದೇಶಿಗರ ಪರಿಶೀಲನೆ ನಡೆಸಲಾಗಿದೆ.
ಅದರಂತೆ ನೌಕಾನೆಲೆಯ ಐಎನ್‍ಎಸ್ ಪತಂಜಲಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇದೆ. ತುರ್ತು ಸಂದರ್ಭದಲ್ಲಿ ನೂರು ಹಾಸಿಗೆಗಳನ್ನು ಬಳಸಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ವಿದೇಶದಿಂದ ಬರುವ ಹಡುಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಸಹ ಮಾಡಲಾಗುತ್ತಿದೆ.





