ಮಾಚಿದೇವ ನಿಗಮ ಮಂಡಳಿ ಲೋಕಾರ್ಪಣೆಗೊಳಿಸಲು ಒತ್ತಾಯ
ಬೆಂಗಳೂರು, ಮಾ.11: ಈ ಹಿಂದೆ ಮೈತ್ರಿ ಸರಕಾರ ಮೀಸಲಿಟ್ಟಿದ್ದ 25 ಕೋಟಿ ರೂ. ಜತೆಗೆ 25 ಕೋಟಿ ರೂ. ಮೀಸಲಿಡಬೇಕು ಮತ್ತು ಈ ಕೂಡಲೇ ಮಾಚಿದೇವ ನಿಗಮ ಮಂಡಳಿಯನ್ನು ಲೋಕಾರ್ಪಣೆಗೊಳಿಸಬೇಕು ಎಂದು ರಾಜ್ಯ ಮಡಿವಾಲರ ಸಂಘ ಒತ್ತಾಯಿಸಿದೆ.
ಬುಧವಾರ ಪ್ರಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ,ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಡಿವಾಳ ಸಮುದಾಯಕ್ಕೆ ಯಾವುದೇ ಅನುದಾನವನ್ನು ಮೀಸಲಿಡದೆ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಈ ಹಿಂದಿನ ಮೈತ್ರಿ ಸರಕಾರದ ಸಂದರ್ಭದಲ್ಲಿ ಮಾಚಿದೇವ ನಿಗಮ ಮಂಡಳಿಯನ್ನು ಸ್ಥಾಪಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು 25 ಕೋಟಿ ರೂ. ಮೀಸಲಿಟ್ಟಿದ್ದರು. ನಂತರ ಬಂದ ಬಿಜೆಪಿ ಸರಕಾರಕ್ಕೆ ನಿಗಮವನ್ನು ಲೋಕಾರ್ಪಣೆ ಮಾಡುವಂತೆ ಮನವಿ ಮಾಡಿದ್ದರೂ ಲೋಕಾರ್ಪಣೆ ಮಾಡುವ ಗೋಜಿಗೂ ಹೋಗದೆ 25 ಕೋಟಿ ರೂ. ಅನ್ನು ಬಳಸಿಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮಡಿವಾಳ ಸಮುದಾಯದ ಜನರಿದ್ದಾರೆ. ಅವರೆಲ್ಲ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಮುದಾಯವನ್ನು ಕಡೆಗಣಿಸಿ ಜಾತಿ ಆಧಾರದ ಮತಗಳ ಲೆಕ್ಕಾಚಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಅಲ್ಲದೇ, ನಮ್ಮ ಜಾತಿಯ ಶಾಸಕ, ಲೋಕಸಭಾ ಸದಸ್ಯ, ರಾಜ್ಯಸಭಾ ಸದಸ್ಯ ಇಲ್ಲದಿರುವದರಿಂದ ಈ ರೀತಿಯಾಗಿ ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.







