ದೇಶದಲ್ಲಿ ತ್ರಿಪಕ್ಷ ಪದ್ಧತಿ ಜಾರಿಯಾಗಲಿ: ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ

ಬೆಂಗಳೂರು, ಮಾ.11: ದೇಶದಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಮಿತಿಮಿರೀದೆ. ಹೀಗಾಗಿ, ದೇಶದಲ್ಲಿ ತ್ರಿಪಕ್ಷ ಪದ್ಧತಿ ಜಾರಿಯಾಗಲಿ ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.
ಬುಧವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ 2599 ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾವಣಿ ಮಾಡಿಕೊಂಡಿವೆ. ಇದರಲ್ಲಿ 8 ರಾಷ್ಟ್ರೀಯ ಪಕ್ಷಗಳು ಹಾಗೂ 58 ಪ್ರಾದೇಶಿಕ ಪಕ್ಷಗಳು ಸಕ್ರಿಯವಾಗಿವೆ ಎಂದು ಹೇಳಿದರು.
ಅಮೆರಿಕಾದಲ್ಲಿ ದ್ವಿಪಕ್ಷ ಪದ್ಧತಿ ಜಾರಿಯಲ್ಲಿದ್ದರೆ, ನಮ್ಮ ದೇಶದಲ್ಲಿ ಬಹುಪಕ್ಷೀಯ ಪದ್ಧತಿ ಜಾರಿಯಲ್ಲಿದೆ. ಈಗಿನ ವ್ಯವಸ್ಥೆ ಸರಿಯಾಗಬೇಕಾದರೆ ತ್ರಿಪಕ್ಷ ಅಗತ್ಯವಿದೆ. ಮೂರು ರಾಷ್ಟ್ರೀಯ ಪಕ್ಷಗಳು ಹಾಗೂ ಮೂರು ಪ್ರಾದೇಶಿಕ ಪಕ್ಷಗಳಿಗೆ ಅಷ್ಟೇ ಅವಕಾಶ ಇರುವಂತಾಗಲಿ ಎಂದು ಸಲಹೆ ಮಾಡಿದರು.
ಶ್ರೀಕಂಠೇಗೌಡ ಮಾತಿಗೆ ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರೂ ಒಳ್ಳೆಯ ಸಲಹೆ ನೀಡಿದ್ದು, ಈ ಕುರಿತು ಚಿಂತಿಸಬೇಕಿದೆ ಎಂದರು. ಈ ವೇಳೆ ಬಿಜೆಪಿ ಸದಸ್ಯರು ದ್ವಿಪಕ್ಷ ಪದ್ಧತಿ ಜಾರಿಯಾಗಲಿ ಎಂದು ಹೇಳಿದರು. ಅದಕ್ಕೆ ಶ್ರೀಕಂಠೇಗೌಡ, ಎಡಪಕ್ಷಗಳೂ ಇವೆ ಅಲ್ಲವೇ ಎಂದು ಹೇಳಿದರು.
ಸಂವಿಧಾನ ಪರಾಮರ್ಶೆಯಾಗಲಿ: ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆಗೆ ರಕ್ತರಹಿತ ಕ್ರಾಂತಿ ಮಾಡಿದ ನಮ್ಮ ಸಂವಿಧಾನದ ಕುರಿತು ಪ್ರತಿ 10 ವರ್ಷಕ್ಕೊಮ್ಮೆ ಪರಾಮರ್ಶೆಯಾಗಬೇಕು. ಆದರೆ, ಸಂವಿಧಾನ ಜಾರಿಯಾದ 70 ವರ್ಷಗಳ ಬಳಿಕ ಪರಾಮರ್ಶೆ ನಡೆಯುತ್ತಿದ್ದು, ಇದು ಬಹಳ ತಡವಾಯಿತು ಎಂದು ತಿಳಿಸಿದರು.
ಸಂವಿಧಾನ ಜಾರಿಯಾದ ಬಳಿಕ ಅನೇಕ ಬದಲಾವಣೆಗಳನ್ನು ನಮ್ಮ ದೇಶ ಕಂಡಿದೆ. ಅನೇಕ ತಿದ್ದುಪಡಿಗಳ ಮೂಲಕ ಹಲವಾರು ಅವಕಾಶಗಳನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಹಿಂದುಳಿದ, ದಲಿತ, ಅಸ್ಪಶ್ಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಮೀಸಲಾತಿಯ ಮೂಲಕ ಎಲ್ಲರನ್ನು ಮೇಲೆತ್ತುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಇಂದು 29 ರಿಂದ 30 ಕೋಟಿ ಜನರು ಕಡು ಬಡವರಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಕೋಟ್ಯಂತರ ಜನರಿಗೆ ಉದ್ಯೋಗ ದೊರೆತಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ. ಸಮಾನವಾದ ಶಿಕ್ಷಣ ನೀಡುವಲ್ಲಿ ಎಡವಿದ್ದೇವೆ. ಏಕರೂಪದ ಶಿಕ್ಷಣ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.
ಒಂದು ಸಂದರ್ಭದಲ್ಲಿ ಆಹಾರಕ್ಕೂ ಪರದಾಡುತ್ತಿದ್ದ ಚೀನಾ, ನಮಗಿಂತ ಐದು ವರ್ಷಗಳ ಬಳಿಕ ಸ್ವತಂತ್ರ ಪಡೆದರೂ ಇಂದು ಅಮೆರಿಕಾವನ್ನು ಮೀರಿ ಅಭಿವೃದ್ಧಿಯಾಗಿದೆ. ಆದರೆ, ಆ ಸ್ಥಾನಕ್ಕೆ ಭಾರತ ತಲುಪಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದ ಅವರು, ನಮ್ಮ ದೇಶದಲ್ಲಿ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.







