ಕೊರೋನ, ಕಾಲರಾ: ಬಿಬಿಎಂಪಿಯಿಂದ ಆರೋಗ್ಯ ಆ್ಯಪ್ ಬಿಡುಗಡೆ

ಬೆಂಗಳೂರು, ಮಾ.11: ಕೊರೋನ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಆರೋಗ್ಯ ಆ್ಯಪ್ ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಕೊರೋನ, ಡೇಂಗ್ಯೂ, ಎಚ್1ಎನ್1, ಕಾಲರಾ ಮತ್ತಿತರ ಸೋಂಕು ರೋಗಗಳು ನಗರದ ಜನರನ್ನು ಬೆಚ್ಚಿ ಬೀಳಿಸಿದ್ದು, ಈ ರೋಗಗಳ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಬಿಬಿಎಂಪಿಯ ಅಧಿಕಾರಿಗಳು ಮಾತ್ರ ಉಪಯೋಗಿಸುತ್ತಿದ್ದ ಪಬ್ಲಿಕ್ ಹೆಲ್ತ್ ಎಪಿಡಮಲಾಜಿಕಲ್ ಇನ್‌ಫರ್ಮೆಷನ್ ಸೆಲ್ (ಪಿಎಚ್‌ಇಐಸಿ) ಅಪ್ಲಿಕೇಷನ್ ಅನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮುಂದಾಗಿದೆ.
ಈ ಆ್ಯಪ್‌ನಲ್ಲಿ ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗಿರುವ ಸಾಂಕ್ರಾಮಿಕ ರೋಗಗಳ ಮಾಹಿತಿಯನ್ನು ಕಲೆ ಹಾಕಿ ಆಯಾ ಮಾಹಿತಿಗಳನ್ನು ಪ್ರದೇಶವಾರು, ವಾರ್ಡ್‌ವಾರು ವಿಂಗಡಿಸಿ ಆಯಾ ವಾರ್ಡ್‌ಗಳ ಆರೋಗ್ಯಾಧಿಕಾರಿಗಳಿಗೆ ರವಾನಿಸಲಾಗುವುದು. ಸಾಂಕ್ರಾಮಿಕ ರೋಗಗಳ ಲಕ್ಷಣ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯಾಧಿಕಾರಿಗಳು ನೀಡುವ ವರದಿಗಳನ್ನು ಆ್ಯಪ್‌ನಲ್ಲಿ ದಾಖಲಾಗಲಿವೆ.
ಬಿಬಿಎಂಪಿಯ ಈ ಆ್ಯಪ್‌ನಲ್ಲಿ ಸಾಂಕ್ರಾಮಿಕ ರೋಗಗಳಿಂದ ಯಾವ ರೀತಿ ರಕ್ಷಿಸಿಕೊಳ್ಳಬಹುದು ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪುಮಾಹಿತಿಗಳಿಂದ ಎಚ್ಚೆತ್ತುಕೊಳ್ಳಲು ಈ ಆ್ಯಪ್ ಸಹಕಾರಿಯಾಗಲಿದೆ.







