ರಾಣಾ ಕಪೂರ್ ಸೂಚನೆಯಂತೆ 20,000 ಕೋಟಿ ರೂ. ಸಾಲ ನೀಡಿದ್ದ ಯೆಸ್ ಬ್ಯಾಂಕ್

ಮುಂಬೈ, ಮಾ.11: ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್‌ನಿಂದ ಮಂಜೂರಾಗಿರುವ ಅನುತ್ಪಾದಕ ಸಾಲ(ಎನ್‌ಪಿಎ)ದ ಒಟ್ಟು ಮೊತ್ತ 42,000 ಕೋಟಿ ರೂ. ಆಗಿದ್ದು ಇದರಲ್ಲಿ 20,000 ಕೋಟಿ ರೂ. ಸಾಲವನ್ನು ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್ ಸೂಚನೆಯಂತೆ ಮಂಜೂರುಗೊಳಿಸಲಾಗಿತ್ತು ಎಂಬುದು ವಿಚಾರಣೆಯ ಸಂದರ್ಭ ಬೆಳಕಿಗೆ ಬಂದಿದೆ.
ದಿ ಕಾಕ್ಸ್ ಆ್ಯಂಡ್ ಕಿಂಗ್ಸ್ ಗ್ರೂಫ್, ಡಿಎಚ್‌ಎಫ್‌ಎಲ್ ಗ್ರೂಪ್, ಸಹಾನಾ ಗ್ರೂಫ್, ರೇಡಿಯಸ್ ಗ್ರೂಪ್ ಸೇರಿದಂತೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಮಾರ್ಗದರ್ಶಿ ಸೂತ್ರ ಹಾಗೂ ನಿಯಮಾವಳಿ ಮೀರಿ ಸಾಲ ಮಂಜೂರುಗೊಳಿಸಿರುವುದು ಇಡಿ ಅಧಿಕಾರಿಗಳ ವಿಚಾರಣೆ ಸಂದರ್ಭ ತಿಳಿದು ಬಂದಿದೆ.
ರಾಣಾ ಕಪೂರ್ ಸೂಚನೆಯ ಮೇರೆಗೆ ಸಾಲ ಮಂಜೂರುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಕಪೂರ್ ಸ್ಥಾಪಿಸಿರುವ ಕೆಲವು ಬೇನಾಮಿ ಸಂಸ್ಥೆಗಳ ಹೆಸರಿನಲ್ಲೂ ಸಾಲ ಮಂಜೂರುಗೊಳಿಸಲಾಗಿದೆ. ಇದೀಗ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಯೆಸ್‌ಬ್ಯಾಂಕ್‌ನ 4,300 ಕೋಟಿ ರೂ. ಮೊತ್ತದ ವ್ಯವಹಾರದ ಬಗ್ಗೆ ಕೇಂದ್ರೀಕರಿತವಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಕಾರ, ಡಿಎಚ್‌ಎಫ್‌ಎಲ್(ದಿವಾನ್ ಹೌಸಿಂಗ್ ಫೈನಾನ್ಸ್ ಲಿ.)ನಿಂದ ಯೆಸ್ ಬ್ಯಾಂಕ್ 3,700 ಕೋಟಿ ರೂ. ಮೊತ್ತದ ಡಿಬೆಂಚರ್‌ಗಳನ್ನು ಖರೀದಿಸಿದೆ. ಅಲ್ಲದೆ ರಾಣಾ ಕಪೂರ್ ಪುತ್ರಿಯ ಹೆಸರಲ್ಲಿರುವ ಸಂಸ್ಥೆಗೆ ಡಿಎಚ್‌ಎಫ್‌ಎಲ್ 600 ಕೋಟಿ ಸಾಲ ಮಂಜೂರುಗೊಳಿಸಿದೆ. ಈ ಎರಡು ವ್ಯವಹಾರದ ಬಗ್ಗೆ ಅಧಿಕಾರಿಗಳು ಸಂಶಯಪಟ್ಟಿದ್ದಾರೆ.
ಕಪೂರ್ ಪುತ್ರಿಯ ಹೆಸರಲ್ಲಿರುವ ಸಂಸ್ಥೆ ಹೆಚ್ಚಿನ ಆಸ್ತಿಯನ್ನು ಹೊಂದಿಲ್ಲ ಅಥವಾ ವ್ಯಾಪಾರ ವಹಿವಾಟು ಕೂಡಾ ಹೆಚ್ಚಿಲ್ಲ. ಅಲ್ಲದೆ , 600 ಕೋಟಿ ರೂ. ಸಾಲ ಪಡೆಯುವಾಗ ಅಡಮಾನ ನೀಡಿರುವ ಆಸ್ತಿ ಕೃಷಿ ಭೂಮಿಯಾಗಿದ್ದರೂ ಇದನ್ನು ವಸತಿ ಭೂಮಿ ಎಂದು ಉಲ್ಲೇಖಿಸಿ ಅದರ ಮೌಲ್ಯವನ್ನು ಸುಮಾರು 40 ಕೋಟಿ ರೂ. ಎಂದು ಉಲ್ಲೇಖಿಸಲಾಗಿದೆ. ಈ ವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







