ಪಡುಬಿದ್ರಿ : ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಪ್ರತಿಭಟನೆ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66 ಪಡುಬಿದ್ರಿಯಲ್ಲಿ ಅಸಮರ್ಪಕ ಕಾಮಗಾರಿಯಿಂದ ಜನರು ಸಮಸ್ಯೆ ಅನುಭವಿಸುತಿದ್ದು, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಪಡುಬಿದ್ರಿ ಪೇಟೆಯಲ್ಲಿ ಬುಧವಾರ ಬೆಳಗ್ಗೆ ಕಾರ್ಕಳ ರಸ್ತೆಯ ಟೆಂಪೋ ನಿಲ್ದಾಣದ ಬಳಿ ಪಡುಬಿದ್ರಿ ಗ್ರಾಮ ಪಂ. ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ನವಯುಗ ಕಂಪೆನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಡುಬಿದ್ರಿಯ ಎಲ್ಲಾ ವ್ಯಾಪಾರಸ್ಥರು, ಕಾರು-ರಿಕ್ಷಾ-ಟೆಂಪೋ ಚಾಲಕರು ಬಂದ್ ನಡೆಸಿ ಪ್ರತಿಭಟನೆಗೆ ಸಾಥ್ ನೀಡಿದರು. ವಿವಿಧ ಸಂಘಟನೆಗಳ ಕಾರ್ಯಕರ್ತರು, ವ್ಯಾಪಾರಸ್ಥರು ಪಾಲ್ಗೊಂಡರು.
ತಹಸೀಲ್ದಾರ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ಮಹಮ್ಮದ್ ಇಸಾಕ್ ಪಡುಬಿದ್ರಿಯ ಕಲ್ಸಂಕ ಒಂದು ಪಾಶ್ರ್ವದ ಕಿರು ಸೇತುವೆ, ಸರ್ವೀಸ್ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದು, ಈ ಬಗ್ಗೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹಮ್ಮದ್ ಇಸಾಕ್, ಪಡುಬಿದ್ರಿಯಲ್ಲಿ ಅಪೂರ್ಣಗೊಂಡ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿ ನವಯುಗ ಕಂಪೆನಿ ಹಾಗೂ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಎಪ್ರಿಲ್ 15ರ ಒಳಗೆ ಕಾಮಗಾರಿ ಪೂರ್ಣ ಗೊಳಿಸುವ ಭರವಸೆ ಯನ್ನು ನೀಡಿದ್ದಾರೆ ಎಂದರು.
ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದಮಯಂತಿ ವಿ ಅಮೀನ್, ಉಪಾಧ್ಯಕ್ಷ ಸುಕುಮಾರ್ ಪಡುಬಿದ್ರಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯ ದಿನೇಶ್ ಕೋಟ್ಯಾನ್ ಫಲಿಮಾರು, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ವ್ಯವಸಾಯ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಸುಧೀರ್ ಕುಮಾರ್, ಜಯ ಶೆಟ್ಟಿ ಪದ್ರ, ದಲಿತ ಸಂಘಟನೆಯ ಮುಖಂಡ ಲೋಕೇಶ್ ಪಡುಬಿದ್ರಿ, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಪಿ.ಕೆ ಮೊಹಿಯುದ್ದೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್‍ಚಂದ್ರ ಸುವರ್ಣ, ಸಂತೋಷ್ ಶೆಟ್ಟಿ ಪಲ್ಲವಿ, ಸುಧಾಕರ ಶೆಟ್ಟಿ ಹೆಜಮಾಡಿ, ರಮೀಝ್ ಹುಸೈನ್, ರವಿ ಶೆಟ್ಟಿ, ಇಸ್ಮಾಯಿಲ್ ಕನ್ನಂಗಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಸಂಘಟನೆಗಳ ಪಧಾಧಿಕಾರಿಗಳು ಭಾಗವಹಿಸಿದ್ದರು.







