ಮಾ.14,15ರಂದು ಹಂಗಾರಕಟ್ಟೆಯಲ್ಲಿ 14ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ವೈದೇಹಿ ಸಮ್ಮೇಳನಾಧ್ಯಕ್ಷೆ
ಉಡುಪಿ, ಮಾ.11: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ 14ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.14 ಮತ್ತು 15ರಂದು ಬ್ರಹ್ಮಾವರ ತಾಲೂಕು ಐರೋಡಿ ಗ್ರಾಪಂನ ಹಂಗಾರಕಟ್ಟೆ ಚೇತನ ಪ್ರೌಢ ಶಾಲೆಯ ಆವರಣದ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಖ್ಯಾತ ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ. ಎರಡು ದಿನಗಳ ಸಮ್ಮೇಳನವನ್ನು ಸಹಕಾರಿರಂಗದ ಸಾಧಕ ಮಹಿಳೆ ಜಾನಕಿ ಹಂದೆ ಹಾಗೂ ರೈತ ಮಹಿಳೆ ಜ್ಯೋತಿ ಕುಲಾಲ್ ಆವರ್ಸೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಜಿಪಂ ಅಧ್ಯಕ್ಷ ದಿನಕರ ಬಾಬು ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಕಸಾಪ ಮಾಜಿ ಅದ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ.
ಸಮ್ಮೇಳನದಲ್ಲಿ ಇರುವಂತಿಗೆ ಶೀರ್ಘಿಕೆಯಡಿಯಲ್ಲಿ ಒಟ್ಟು 14 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮರೆಯಲಾರದ ಮಹನೀಯರ ನೆನಪಿನ ಕಾರ್ಯಕ್ರಮದಲ್ಲಿ ಉಡುಪಿಯ ಖಾನ್ ಸಾಹೇಬ್ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬ್‌ರ ಕುರಿತು ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಖ್ಯಾತ ಚಿತ್ರಕಲಾವಿದ ಬಿ.ಪಿ.ಬಾಯ ಕುರಿತು ಉಪನ್ಯಾಸಕಿ ಡಾ.ಭಾರತಿ ಮರವಂತೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಕವಿಗೋಷ್ಠಿ, ಯಕ್ಷಗಾನ ಸ್ಥಿತ್ಯಂತರ, ವಿದ್ಯಾರ್ಥಿ ಗೋಷ್ಠಿ, ನನ್ನ ಕಥೆ ನಿಮ್ಮ ಜೊತೆ, ನಮ್ಮ ಉಡುಪಿ, ಮಹಿಳಾ ಗೋಷ್ಠಿ, ವೈದೇಹಿ ಅವರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, 15ರ ಅಪರಾಹ್ನ 3:30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ ಎಂದು ಸುರೇಂದ್ರ ಅಡಿಗ ತಿಳಿಸಿದರು.
ರವಿವಾರ ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಂಶೋಧಕ, ಸಾಹಿತಿ ಸುಬ್ಬಣ್ಣ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ 18 ಮಂದಿಗೆ ಹಾಗೂ ಮೂರು ಸಂಘಸಂಸ್ಥೆಗಳಿಗೆ ಸನ್ಮಾನವೂ ನಡೆಯಲಿದೆ. ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 15ರ ಸಂಜೆ 6:30ರಿಂದ ಪ್ರಸಿದ್ಧ ಜಾನಪದ ತಂಡಗಳಿಂದ ಜನಪದ ಸಂಗಮ ‘ದಯ್ಯರೇ ದಯ್ಯ...’ ನಡೆಯಲಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ತಾಲೂಕು ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಹಂಗಾರ ಕಟ್ಟೆ ಚೇತನಾ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಭರತಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.







