ಉದಯಗೌಡ ಮಾಲಕತ್ವದ ಕ್ಲಬ್ ಮೇಲೆ ದಾಳಿ ಪ್ರಕರಣ: ಸಿಸಿಬಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಬೆಂಗಳೂರು, ಮಾ.11: ಆಪರೇಷನ್ ಕಮಲ ಪ್ರಕರಣದ ಕಿಂಗ್‌ಪಿನ್ ಎಂಬ ಆರೋಪ ಹೊತ್ತಿರುವ ಉದಯಗೌಡ ಮಾಲಕತ್ವದ ಕ್ಲಬ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಎಂಟು ವಾರಗಳ ಕಾಲ ಮಧ್ಯಂತರ ತಡೆ ನೀಡಿ, ಸಿಸಿಬಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ರದ್ದು ಕೋರಿ ಉದಯಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಯಾವುದೇ ಕಾರಣವನ್ನೂ ನೀಡದೆ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಉದಯಗೌಡ ಅವರ ಎಂ.ಜಿ.ರಸ್ತೆಯಲ್ಲಿರುವ ಕ್ಲಬ್ ಮೇಲೆ ಸಿಸಿಬಿಯಿಂದ ದಾಳಿ ನಡೆಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣದ ವಿಚಾರಣೆಗೆ ತಡೆ ನೀಡಿ, ಸಿಸಿಬಿಗೆ ನೋಟಿಸ್ ಜಾರಿಗೊಳಿಸಿತು. ಆಪರೇಷನ್ ಕಮಲ ಪ್ರಕರಣದ ಕಿಂಗ್‌ಪಿನ್ ಎಂಬ ಆರೋಪ ಹೊತ್ತಿರುವ ಉದಯ್ ಗೌಡ್ ಬಂಧನಕ್ಕೆ ಈ ಮೊದಲು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಒಡ್ಡುವ ಚಟುವಟಿಕೆಯಲ್ಲಿ ಉದಯ್ ಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರು ನೀಡಲಾಗಿತ್ತು.





