ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ ನೀಡಿದ ಎಸ್ ಬಿಐ

ಫೈಲ್ ಚಿತ್ರ
ಹೊಸದಿಲ್ಲಿ, ಮಾ.11: ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಬುಧವಾರ ಉಳಿತಾಯ ಖಾತೆ(ಸೇವಿಂಗ್ಸ್ ಅಕೌಂಟ್)ಯ ಬಡ್ಡಿದರವನ್ನು ಕಡಿತಗೊಳಿಸಿದ್ದು ಇದು ಬ್ಯಾಂಕಿನ 44.51 ಕೋಟಿ ಉಳಿತಾಯ ಖಾತೆದಾರರ ಮೇಲೆ ಪರಿಣಾಮ ಬೀರಲಿದೆ.
ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು 3%ಕ್ಕೆ ಇಳಿಸಲಾಗಿದೆ. ಇದುವರೆಗೆ ಉಳಿತಾಯ ಖಾತೆಯಲ್ಲಿ 1 ಲಕ್ಷ ರೂ.ವರೆಗಿನ ಹಣವಿದ್ದರೆ 3.25% ಬಡ್ಡಿದರ, 1 ಲಕ್ಷ ರೂ.ಗಿಂತ ಹೆಚ್ಚಿನ ಹಣವಿದ್ದರೆ 3% ಬಡ್ಡಿದರ ನಿಗದಿಯಾಗಿತ್ತು. ಇದೇ ವೇಳೆ ಸರಾಸರಿ ಮಾಸಿಕ ಬ್ಯಾಲೆನ್ಸ್ ನಿಯಮವನ್ನು ಕೈಬಿಡಲು ಬ್ಯಾಂಕ್ ನಿರ್ಧರಿಸಿದೆ.
ಇದುವರೆಗೆ ಮೆಟ್ರೋ ನಗರಗಳ ಗ್ರಾಹಕರು ಎಸ್ಬಿಐ ಖಾತೆಯಲ್ಲಿ ಮಾಸಿಕ 3,000 ರೂ. ಕನಿಷ್ಟ ಬ್ಯಾಲೆನ್ಸ್, ಅರೆ ನಗರ ಪ್ರದೇಶಗಳ ಗ್ರಾಹಕರು 2,000 ರೂ. ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರು 1,000 ರೂ. ಬ್ಯಾಲೆನ್ಸ್ ಹೊಂದಿರಬೇಕಿತ್ತು.
ಸರಾಸರಿ ಮಾಸಿಕ ಬ್ಯಾಲೆನ್ಸ್ ಹೊಂದಿರದ ಗ್ರಾಹಕರ ಮೇಲೆ 5ರಿಂದ 15 ರೂ. (ಜೊತೆಗೆ ತೆರಿಗೆ)ಯನ್ನು ಶುಲ್ಕವಾಗಿ ವಿಧಿಸಲಾಗುತ್ತಿತ್ತು. ಜೊತೆಗೆ, ಎಸ್ಎಂಎಸ್ ಶುಲ್ಕವನ್ನೂ ಕೈಬಿಡಲಾಗಿದೆ ಎಂದು ಎಸ್ಬಿಐ ಪ್ರಕಟಣೆ ತಿಳಿಸಿದೆ.