ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ನೇಮಕ: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಂಭ್ರಮ

ಮಂಗಳೂರು, ಮಾ.11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಎಐಸಿಸಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಬುಧವಾರ ದ.ಕ.ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಬಳಿಕ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇಮಕದಿಂದ ರಾಜ್ಯಾದ್ಯಂತ ಪಕ್ಷಕ್ಕೆ ಬಲಬಂದಂತಾಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ರಾಜ್ಯದಲ್ಲಿ ಡಿಕೆಶಿ ಸಾರಥ್ಯದಲ್ಲಿ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಗ್ರಾಪಂ, ತಾಪಂ, ಜಿಪಂ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಕೂಡ ಜಯಗಳಿಸಲಾಗಿದೆ. ಡಿಕೆಶಿ ನೇತೃತ್ವದಲ್ಲಿ ಕರ್ನಾಟಕವನ್ನು ಬಿಜೆಪಿ ಮುಕ್ತ ರಾಜ್ಯವಾಗಿಸಲು ಸಂಕಲ್ಪ ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಮಾಜಿ ಮೇಯರ್ ಮಹಾಬಲ ಮಾರ್ಲಾ, ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುರ್ರವೂಫ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತಬೈಲ್, ಕಾರ್ಪೊರೇಟರ್‌ಗಳಾದ ಕೇಶವ ಮರೋಳಿ, ವಿನಯರಾಜ್, ಝೀನತ್, ಅಶ್ರಫ್, ಶಂಸುದ್ದೀನ್, ಪಕ್ಷದ ಮುಖಂಡರಾದ ವಿಶ್ವಾಸ್‌ದಾಸ್, ಟಿ.ಕೆ. ಸುಧೀರ್, ನೀರಜ್‌ಪಾಲ್, ಸಂತೋಷ ಶೆಟ್ಟಿ, ಫಾರೂಕ್ ಫರಂಗಿಪೇಟೆ, ಚೇತನ್ ಕುಮಾರ್, ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.










