ಒಂದು ವಾರದಲ್ಲಿ ಮತ್ತೆ ಮರಳುಗಾರಿಕೆ ಆರಂಭ: ರಘುಪತಿ ಭಟ್
ಉಡುಪಿಯಲ್ಲಿ 10 ದಿಬ್ಬಗಳ ಮರಳು ತೆರವಿಗೆ ಅನುಮೋದನೆ
ಉಡುಪಿ, ಮಾ.11: ಉಡುಪಿ ಜಿಲ್ಲೆಯ ಸಿಆರ್‌ಝಡ್ ವಲಯ ವ್ಯಾಪ್ತಿಯ ಒಟ್ಟು 13 ಮರಳು ದಿಬ್ಬಗಳ ತೆರವಿಗೆ ಉಡುಪಿ ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ (ಡಿಸಿಝಡ್‌ಎಂಸಿ) ಮಾಡಿದ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ) ತನ್ನ ಫೆ.14ರ ಸಭೆಯಲ್ಲಿ ಒಟ್ಟು 10 ಮರಳು ದಿಬ್ಬಗಳ ತೆರವಿಗೆ ಕರಾವಳಿ ನಿಯಂತ್ರಣ ವಲಯ ನಿರಾಪೇಕ್ಷಣಾ ಪತ್ರ (ಸಿಆರ್‌ಝಡ್ ಕ್ಲಿಯರೆನ್ಸ್)ವನ್ನು ನೀಡಿದೆ.
ಜಿಲ್ಲೆಯ ಸ್ವರ್ಣ ನದಿಯಲ್ಲಿ ಗುರುತಿಸಿರುವ ಆರು ದಿಬ್ಬಗಳು, ಸೀತಾ ನದಿಯಲ್ಲಿ ಗುರುತಿಸಿರುವ ಮೂರು ಮರಳು ದಿಬ್ಬಗಳು ಹಾಗೂ ಪಾಪನಾಶಿನಿ ನದಿಯಲ್ಲಿ ಗುರುತಿಸಿರುವ ಒಂದು ದಿಬ್ಬ ಸೇರಿದಂತೆ ಉಡುಪಿ ತಾಲೂಕಿನ ಒಟ್ಟು 10 ದಿಬ್ಬಗಳಲ್ಲಿ ಲಭ್ಯವಿರುವ 7.13 ಲಕ್ಷ ಮೆಟ್ರಿಕ್ ಟನ್ ಮರಳುಗಳ ತೆರವಿಗೆ ಪ್ರಾಧಿಕಾರ ತನ್ನ ಅನುಮೋದನೆ ನೀಡಿದೆ.
ಸ್ವರ್ಣ ನದಿಯ ಒಂದು, ಪಾಪನಾಶಿನಿಯ ಎರಡು ಮರಳು ದಿಬ್ಬಗಳಲ್ಲಿ ಮರಳಿನ ಸಂಗ್ರಹ ತೀರಾ ಕಡಿಮೆ ಇದ್ದು, ಸಮುದ್ರದ ಉಬ್ಬರದ ಸಮಯಲ್ಲಿ ಅದು ಸ್ವಾಭಾವಿಕವಾಗಿ ತೆರವುಗೊಳ್ಳುವ ಕಾರಣ ಇವುಗಳ ತೆರವಿಗೆ ಅನುಮತಿ ನೀಡಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ 7 ಸದಸ್ಯರ ಸಮಿತಿ ಸಭೆಯು ಎನ್‌ಐಟಿಕೆ ಸುರತ್ಕಲ್‌ನ ತಜ್ಞರು ನೀಡಿದ ವರದಿಯ ಆಧಾರದಲ್ಲಿ ಈ ದಿಬ್ಬಗಳ ತೆರವಿಗೆ ಕಳೆದ ಡಿ.5ರಂದು ನಡೆದ ಸಭೆಯಲ್ಲಿ ಪ್ರಸ್ತಾಪಗಳನ್ನು ಸಲ್ಲಿಸಿತ್ತು. ಇವುಗಳಲ್ಲಿ ಸೀತಾನದಿಯ ಮೂರು ಮರಳು ದಿಬ್ಬಗಳಲ್ಲಿ ಅತ್ಯಧಿಕ ಪ್ರಮಾಣದ ಮರಳಿನ ಸಂಗ್ರಹವಿದೆ.
ಒಂದು ವಾರದಲ್ಲಿ ಅನುಮತಿ: ಜಿಲ್ಲೆಯ 10 ದಿಬ್ಬಗಳ ಮರಳು ತೆರವುಗೊಳಿಸಲು ಕೆಎಸ್‌ಇಝಡ್‌ಎಂನ ಸಿಆರ್‌ಝಡ್ ಸಮಿತಿ ಅನುಮತಿ ನೀಡಿರುವುದರಿಂದ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಳು ಮಂದಿ ಸದಸ್ಯರ ಸಮಿತಿ ಯಲ್ಲಿ ಮಂಡಿಸಲಾದ 171 ಮಂದಿ ಪರವಾನಿಗೆದಾರರಿಗೆ ಮರಳು ತೆಗೆಯಲು ಅನುಮತಿ ದೊರೆಯಲಿದ್ದು, ತೆಗೆದ ಮರಳನ್ನು ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮರಳುಗಾರಿಕೆ ಪ್ರಾರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.







