ಕೊರೋನ ವೈರಸ್ ಎಫೆಕ್ಟ್: ಡೇರಿ ಘಟಕಗಳ ಭೇಟಿ/ ಸಂದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ
ಉಡುಪಿ, ಮಾ.11: ಪ್ರಪಂಚದಾದ್ಯಂತ ಕೊರೋನ ವೈರಸ್ ವ್ಯಾಪಕವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ನಮ್ಮ ದೇಶದಲ್ಲೂ ಇದರ ಕರಾಳ ಛಾಯೆ ಮೂಡುತ್ತಿರುವ ಕಾರಣ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಇದರ ಘಟಕಗಳ (ಮಂಗಳೂರು ಡೇರಿ, ಉಡುಪಿ ಡೇರಿ, ಮಣಿಪಾಲ ಶೀತಲೀಕರಣ ಕೇಂದ್ರ ಹಾಗೂ ಪುತ್ತೂರು ಶೀತಲೀಕರಣ ಕೇಂದ್ರ) ಭೇಟಿ/ ಸಂದರ್ಶನವನ್ನು ಮುಂಜಾಗೃತಾ ಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಅನಿರ್ದಿಷ್ಟಾವಧಿವರೆಗೆ ನಿರ್ಬಂಧಿಸಲಾಗಿದೆ.
ಒಕ್ಕೂಟದ ಎಲ್ಲಾ ಸಿಬ್ಬಂದಿಗಳಿಗೆ ಕೊರೋನ ನಿಯಂತ್ರಣ/ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಬುಧವಾರ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೂಟದ ಡೇರಿ ಘಟಕಗಳ ವೀಕ್ಷಣೆಗೆ ಭೇಟಿ ನೀಡುವುದನ್ನು ಮುಂದೂಡಿ ಸಹಕರಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





