ಭವಿಷ್ಯದಲ್ಲಿ ಜನರಲ್ ಕ್ಯಾಟಗರಿ ಇರಲ್ಲ: ಉಪಮುಖ್ಯಮಂತ್ರಿ ಕಾರಜೋಳ

ಬೆಂಗಳೂರು, ಮಾ.11: ಎಸ್ಸಿ-ಎಸ್ಟಿಗಳಿಗೆ ತಮ್ಮ ಸಮುದಾಯವನ್ನು ಸೇರಿಸುವಂತೆ ಅನೇಕರು ಬೇಡಿಕೆ ಇಡುತ್ತಾರೆ. ಹೀಗೇ ಮುಂದುವರೆದರೆ, ಭವಿಷ್ಯದಲ್ಲಿ ಜನರಲ್ ಕ್ಯಾಟಗರಿಯಲ್ಲಿ ಯಾರು ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ವೀಣಾ ಅಚ್ಚಯ್ಯ ಅವರ ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
ಎಲ್ಲರೂ ನಮ್ಮನ್ನು ಎಸ್ಸಿ, ಎಸ್ಟಿಗೆ ಸೇರಿಸಿ ಎಂದು ಪಟ್ಟುಹಿಡಿಯುತ್ತಾರೆ. ಆದರೆ, ಹೀಗೆ ಮಾಡಿದರೆ, ಜನರಲ್ ಕ್ಯಾಟಗರಿಯಲ್ಲಿ ಜನಾನೇ ಉಳಿಯುವುದಿಲ್ಲ. ಅಲ್ಲದೆ, ಎಸ್ಸಿಗೆ ಸೇರಿಸುವ ಮಾನದಂಡವೇ ಅಸ್ಪೃಶ್ಯತೆ ಆಗಿದೆ. ಹೀಗಾಗಿಯೇ, ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಗೆ ಉತ್ತರಿಸುವುದಿಲ್ಲ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ ರಾಥೋಡ್, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಆಸ್ಪೃಶ್ಯತೆ ಮಾನದಂಡ ಎಂದು ಉಲ್ಲೇಖಿಸಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ನಾನು ತಂದು ತೋರಿಸುತ್ತೇನೆ ಎಂದು ನುಡಿದರು.







