ಒಲಿಂಪಿಕ್ಸ್ ಗೆ ಅರ್ಹತೆ ಪಡೆದ 9ನೇ ಬಾಕ್ಸರ್ ಮನೀಷ್ ಕೌಶಿಕ್

ಅಮ್ಮಾನ್(ಜೋರ್ಡನ್), ಮಾ.11: ಏಶ್ಯನ್ ಕ್ವಾಲಿಫೈಯರ್‌ನಲ್ಲಿ ಆಸ್ಟ್ರೇಲಿಯದ ಹ್ಯಾರಿಸನ್ ಗಾರ್ಸೈಡ್‌ರನ್ನು ಮಣಿಸಿದ ಮನೀಷ್ ಕೌಶಿಕ್(63ಕೆಜಿ)ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ 9ನೇ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಕೌಶಿಕ್ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಹಾಗೂ ಎರಡನೇ ಶ್ರೇಯಾಂಕದ ಗಾರ್ಸೈಡ್‌ರನ್ನು 4-1 ಅಂತರದಿಂದ ಮಣಿಸಿ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆಸ್ಟ್ರೇಲಿಯದ ಬಾಕ್ಸರ್ ಮುಖದಲ್ಲಿ ರಕ್ತ ಸೋರುತ್ತಿದ್ದರೂ ತನ್ನ ಹೋರಾಟವನ್ನು ಮುಂದುವರಿಸಿದ್ದು, ಭಾರತದ ಬಾಕ್ಸರ್ ಶಕ್ತಿಶಾಲಿ ಪಂಚ್ ನೀಡುವುದರೊಂದಿಗೆ ಗಮನ ಸೆಳೆದರು.
2018ರ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಕೌಶಿಕ್-ಗಾರ್ಸೈಡ್ ಮುಖಾಮುಖಿಯಾಗಿದ್ದರು. ಈ ಬಾರಿ ಕೌಶಿಕ್ ಜಯಭೇರಿ ಬಾರಿಸಿದ್ದಾರೆ. ‘‘ಒಲಿಂಪಿಕ್ಸ್‌ನಲ್ಲಿ ಆಡುವುದು ನನ್ನ ಕನಸಾಗಿತ್ತು. ನನಗೆ ಹಾಗೂ ನನ್ನ ಕುಟುಂಬಕ್ಕೆ ಇಂದು ಕನಸು ಕೈಗೂಡಿತು. ಇದರಲ್ಲಿ ನನ್ನ ಕೋಚ್‌ಗಳ ಕಾಣಿಕೆ ಮಹತ್ವದ್ದಾಗಿತ್ತು’’ ಎಂದು ಯೋಧ ಕೌಶಿಕ್ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು. ಈಗ ನಡೆಯುತ್ತಿರುವ ಟೂರ್ನಿಯಲ್ಲಿ 63 ಕೆಜಿ ವಿಭಾಗದಲ್ಲಿ ಅಗ್ರ-6 ಬಾಕ್ಸರ್‌ಗಳು ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆದಿದ್ದಾರೆ.







