ಐಸಿಸಿ ಮಂಡಳಿ ಸಭೆ ರದ್ದು

ಮುಂಬೈ, ಮಾ.11: ಕೊರೋನ ವೈರಸ್ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ)ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸದಸ್ಯ ಮಂಡಳಿಗಳ ನಾಲ್ಕು ದಿನಗಳ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ವಿಶ್ವದಾದ್ಯಂತ ಹಲವು ದೇಶಗಳ ಜನರಿಗೆ ಕೊರೋನ ವೈರಸ್ ಹಬ್ಬಿರುವ ಹಿನ್ನೆಲೆಯಲ್ಲಿ ಸಭೆ ನಡೆಯುವ ಎರಡು ದಿನಗಳ ಮೊದಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಐಸಿಸಿ ಈ ಕುರಿತು ಸದಸ್ಯ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಹೆಚ್ಚಿನ ಮಂಡಳಿಗಳು ಈ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿವೆ. ಸಭೆಗೆ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ವಾರ್ಷಿಕ ಮಹಾಸಭೆ ನಡೆಯುವ ಜೂನ್‌ನಲ್ಲಿ ಐಸಿಸಿ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆ ಕೊರೋನ ವೈರಸ್ ಭೀತಿಯ ಕಾರಣಕ್ಕೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಸದಸ್ಯರುಗಳು ಕೂಡ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ತನ್ನ ಅಧಿಕಾರದ ಅವಧಿಯನ್ನು ವಿಸ್ತರಿಸುವುದನ್ನು ನಾನು ನಿರೀಕ್ಷಿಸುವುದಿಲ್ಲ. ಇನ್ನು ಮುಂದೆ ಆಡಳಿತ ಮಂಡಳಿಗೆ ಮರಳಲಾರೆ ಎಂದು ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಹೇಳಿದ್ದಾರೆ.
ಎಸಿಸಿ ಹಾಗೂ ಐಸಿಸಿ ಸಭೆಗಳು ರದ್ದಾಗಿರುವ ಕಾರಣ ಈಗಾಗಲೇ ಬಿಕ್ಕಟ್ಟು ಎದುರಿಸುತ್ತಿರುವ ಜಾಗತಿಕ ಆಡಳಿತವು ಮತ್ತಷ್ಟು ಹಿನ್ನಡೆ ಅನುಭವಿಸಿದೆ.





