ಬಿಜೆಪಿ ಧರ್ಮದ ಆಧಾರಿತವಾಗಿ ಅಧಿಕಾರಕ್ಕೆ ಬಂದಿದೆ: ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ

ಬೆಂಗಳೂರು, ಮಾ. 12: ದೇಶದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಧರ್ಮಾಧಾರಿತವಾಗಿ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ ಕಾರ್ಯಕ್ರಮಗಳನ್ನು ಆಧರಿಸಿ ಅಧಿಕಾರ ಪಡೆದಿತ್ತು ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದ್ದಾರೆ.
ಗುರುವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ರಾಮಮಂದಿರ ವಿಷಯ ತಗೊಂಡು ರಾಜಕೀಯ ಮಾಡಿದರು. ಅನಂತರ ಇಂದಿಗೂ ಅದೇ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದಾರೆ ಎಂದು ದೂಷಿಸಿದರು.
ಇಂದಿನ ಸಂದರ್ಭಕ್ಕೆ ರಾಮಮಂದಿರದ ಅಗತ್ಯವಿದೆಯಾ, ಬೇಡವಾ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಅವರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ತೇಜಸ್ವಿನಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮೂಲಕ ಜನರಿಂದ ಆಯ್ಕೆಯಾದ ಪಕ್ಷವೊಂದರ ಬಗ್ಗೆ ಹೀಗೆ ಟೀಕಿಸುವುದು ಸರಿಯಲ್ಲ. ಯಾವ ಮಾನದಂಡವನ್ನಿಟ್ಟುಕೊಂಡು ಈ ಹೇಳಿಕೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಪ್ರಾಣೇಶ್, ಕೇವಲ ದೇವಸ್ಥಾನಗಳ ಬಗ್ಗೆ ಯಾಕೆ ಪ್ರಸ್ತಾಪ ಮಾಡುತ್ತೀರಾ. ಮಸೀದಿ, ಚರ್ಚ್‌ಗಳ ಬಗ್ಗೆಯೂ ಮಾತನಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಧರ್ಮಸೇನಾ, ನಾನು ಎಲ್ಲದರ ಬಗ್ಗೆಯೂ ಮಾತನಾಡಲು ಸಿದ್ಧನಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ಅದಕ್ಕೂ ಮೊದಲು ಮಾತನಾಡಿದ ಮರಿತಿಬ್ಬೇಗೌಡ, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಫಲಾನುಭವಿಗಳು. ಆದರೆ, ಇಂದು ಸಂವಿಧಾನದ ಫಲಾನುಭವಿಗಳು ಮಾಡಬೇಕಾದ ಕೆಲಸ ನೆಟ್ಟಗೆ ಮಾಡುತ್ತಿಲ್ಲ ಎಂದ ಅವರು, ಸಚಿವ ಸಿ.ಟಿ.ರವಿಯೇ ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ ಎನ್ನುತ್ತಾರೆ. ಅದರ ಅರ್ಥ ಏನು ಎಂದು ಪ್ರಶ್ನಿಸಿದರು. ದೇಶದಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲ ಸರಕಾರಗಳು ಸಂವಿಧಾನಕ್ಕೆ ಅಪಚಾರ ಮಾಡಿವೆ. ಶಿಕ್ಷಣ ಪಡೆದ ಅನೇಕರಲ್ಲಿ ಅಸ್ಪಶ್ಯತೆ ಅಧಿಕವಾಗಿದೆ. ನಮ್ಮ ನಡುವೆ ಸಾಮರಸ್ಯ, ಪ್ರೀತಿಯಿಲ್ಲ, ಎಲ್ಲರೂ ಸಮಾನರಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಇಂದಿನ ಶಿಕ್ಷಣವೂ ಅಂಕಗಳಿಗೆ ಸೀಮಿತವಾಗಿದ್ದು, ಜ್ಞಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳು ನಾಯಿಗಳಿದ್ದಂತೆ...
ಮಾಧ್ಯಮಗಳು ಇಂದಿನ ಬಂಡವಾಳಶಾಹಿಗಳ ಪ್ರೀತಿಯ ನಾಯಿಗಳಾಗಿವೆ. ಅವರು(ಬಂಡವಾಳಶಾಹಿತಿಗಳು) ಸಾಕಷ್ಟು ಮಾಂಸ, ಆಹಾರ, ನೀರು ನೀಡುತ್ತಿವೆ. ಹೀಗಾಗಿ, ಮನೆಯ ಮಾಲಕರನ್ನು ಏನೂ ಮಾಡುತ್ತಿಲ್ಲ. ಹೊರಗಿನವರನ್ನು ನೋಡಿದರೆ ಮೇಲೆ ಬಿದ್ದು ಕಚ್ಚಲು ಬರುತ್ತವೆ ಎಂದು ಕಾಂಗ್ರೆಸ್ ಸದಸ್ಯ ಧರ್ಮಸೇನಾ ಹೇಳಿದರು.







