ಉಡುಪಿ ನಗರಸಭೆ: ಸ್ವಚ್ಚತೆಗಾಗಿ ವಾರ್ಡ್ ಮಟ್ಟದಲ್ಲಿ ಸ್ಪರ್ಧೆ

ಉಡುಪಿ : ನಗರಸಭೆಯ ಎಲ್ಲ ವಾರ್ಡುಗಳಲ್ಲಿ ಸ್ವಚ್ಛತೆ ಕುರಿತು ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಮೊದಲ ಸ್ಥಾನ ಗಳಿಸಿದ ವಾರ್ಡಿಗೆ ಬಹುಮಾನ ನೀಡುವ ಅಭ್ಯುದಯ ಬಳಗ ಆಯೋಜಿಸಿದ ಉಡುಪಿ ಸ್ವಚ್ಛತಾ ಅಭಿಯಾನಕ್ಕೆ ಗುರುವಾರ ಶ್ರೀಕೃಷ್ಣಮಠದ ಕನಕಮಂಟಪದಲ್ಲಿ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತಿೀರ್ಥ ಶ್ರೀಪಾದರು ಚಾಲನೆ ನೀಡಿದರು.
‘ಒಳ್ಳೆಯ ಚಿಂತನೆಗೆ ಮನಸ್ಸು ಶುದ್ಧವಾಗಿರಬೇಕು. ಶುದ್ಧ ಮನಸ್ಸಿಗೆ ಆಹಾರ ಶುದ್ಧವಾಗಿರಬೇಕು. ಆಹಾರ ಶುದ್ಧವಾಗಿರಲು ಆಹಾರಧಾನ್ಯಗಳು ಶುದ್ಧ ವಾಗಿರಬೇಕು. ಹೀಗೆ ನಮ್ಮ ಶಾಸ್ತ್ರಗಳು ಸ್ವಚ್ಛತೆಗೆ ಮಹತ್ವ ನೀಡಿವೆ. ಇದರಲ್ಲಿ ಬಾಹ್ಯ ಮತ್ತು ಆಂತರಿಕ ಎಂದು ಎರಡು ರೀತಿಗಳಿವೆ.’ ಎಂದವರು ಆರ್ಶೀವಚನ ನೀಡುತ್ತಾ ತಿಳಿಸಿದರು.
ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಾಹ್ಯ ಸ್ವಚ್ಛತೆ. ಪರಿಸರ ಸ್ವಚ್ಛವಾಗಿಲ್ಲ ದಿದ್ದರೆ ಏಕಾಗ್ರತೆ ಇರುವುದಿಲ್ಲ, ಕಾಯಿಲೆಗಳೂ ಬರುತ್ತವೆ ಎಂದು ಎಚ್ಚರಿಸಿದ ಸ್ವಾಮೀಜಿ, ನಾವು ಸಾಧ್ಯವಾದಷ್ಟು ಕಸವನ್ನು ಎಸೆಯದಂತೆ ನೋಡಿಕೊಳ್ಳಬೇಕು. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಗೊಳಿಸಬೇಕು ಎಂದರು.
ಎಳವೆಯಲ್ಲಿಯೇ ಸ್ವಚ್ಚತೆಯ ಪ್ರಜ್ಞೆಯನ್ನು ಮೂಡಿಸಬೇಕು. ಪರಿಸರಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಬೇಕು. ಎಲ್ಲರೂ ಸಂಘಟಿತರಾಗಿ ಜನಜಾಗೃತಿ ಮಾಡಿದರೆ ಜನರೂ ಇವುಗಳನ್ನು ಸ್ವೀಕರಿಸುತ್ತಾರೆ ಎಂದು ಅದಮಾರುಶ್ರೀಗಳು ನುಡಿದರು.
ಇದೇ ಸಂದರ್ಭ 100 ಸಂಸ್ಥೆಗಳಿಗೆ ತಲಾ ಎರಡರಂತೆ ಪೈಪ್ ಕಾಂಪೊಸ್ಟ್ ಮಾಡಲು ಎರಡು ಪೈಪ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘಗಳು ಪೈಪ್‌ಗಳನ್ನು ಪ್ರಾಯೋಜಿಸಿ ನೂರು ಸಂಸ್ಥೆಗಳಿಗೆ ವಿತರಿಸಲಿವೆ. ಪ್ರಸ್ತುತ ಉಡುಪಿಯಲ್ಲಿ ಶೇ.7ಪೈಪ್ ಕಾಂಪೋಸ್ಟ್ ಅಳವಡಿಕೆಯಾಗಿದೆ.
ಆಯಾ ವಾರ್ಡುಗಳಲ್ಲಿ ದಿನ ನಿಗದಿಪಡಿಸಿದಂತೆ ಪ್ರತಿ ತಿಂಗಳ ಒಂದು ರವಿವಾರ ಕಡ್ಡಾಯವಾಗಿ ಸ್ವಚ್ಛತಾ ಅಭಿಯಾನ ನಡೆಸಿ ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಕೆರೆ ಕಟ್ಟಗಳನ್ನು ಕಾಪಾಡಿ ಕೊಂಡು ಜಲಜಾಗೃತಿ ರೂಪಿಸುವುದೇ ಮೊದಲಾದ 21 ಮಾನ ದಂಡಗಳನ್ನು ಇರಿಸಿಕೊಳ್ಳಲಾಗಿದೆ.
ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಸಂವೇದನ ಫೌಂಡೇಶನ್‌ನ ಪ್ರಕಾಶ್ ಮಲ್ಪೆ ಪ್ರಸ್ತಾವನೆಗೈದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಸಂಯೋಜಕ ಹರೀಶ ಕರಂಬಳ್ಳಿ ವಂದಿಸಿದರು.







