ಉಡುಪಿ ನಗರಸಭೆಯಲ್ಲಿ ಅಸಮರ್ಪಕ ಕುಡಿಯುವ ನೀರಿನ ಪೂರೈಕೆ: ಅಧಿಕಾರಿಗಳೊಂದಿಗೆ ನಗರಸಭಾ ಸದಸ್ಯರ ಸಮಾಲೋಚನೆ
ಉಡುಪಿ, ಮಾ.12: ಇತ್ತೀಚೆಗೆ ಉಡುಪಿ ನಗರವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ನಗರಸಭೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಆರಂಭಿಸಿದ ನಂತರ ನಗರ ಪ್ರದೇಶದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಸಮರ್ಪಕವಾಗಿದ್ದು, ಈ ಕುರಿತು ನಗರದ ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸುತಿದ್ದಾರೆ ಎಂದು ಗರಸಭಾ ಸದಸ್ಯರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ನಗರಸಭಾ ಸದಸ್ಯರುಗಳು ಕಾಮಗಾರಿ ಅಭಯಂತರರಾದ ಮೋಹನ್‌ರಾಜ್‌ರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಪ್ರಮುಖವಾಗಿ ಮೂರನೇ ವಲಯದ ಮಣಿಪಾಲ, ಈಶ್ವರನಗರ, ಸರಳೆಬೆಟ್ಟು, ಇಂದಿರಾನಗರ, ಹಾಗು ಒಳಕಾಡು ವಾರ್ಡ್‌ಗಳ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಾಗದಿವುದರ ಬಗ್ಗೆ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಮತ್ತು ಚಂದ್ರಶೇಖರ್ ಅಧಿಕಾರಿಗಳ ಗಮನ ಸೆಳೆದು ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಇದಕ್ಕೆ ಸ್ಪಂದಿಸಿದ ಮೋಹನ್‌ರಾಜ್, ಅಧಿಕಾರಿಗಳು ಹಾಗು ವಾಲ್ವ್ಮ್ಯಾನ್ ಗಳ ಜೊತೆ ಸಮಾಲೋಚಿಸುವುದಾಗಿ ತಿಳಿಸಿದರು. ಹೊಸ ವಲಯ ವ್ಯವಸ್ಥೆಯಿಂದ ಒಂದು ಹಾಗು ಎರಡನೇ ವಲಯಗಳಲ್ಲಿ ನೀರಿನ ಪೂರೈಕೆ ಸಮಸ್ಯೆ ಬಹುತೇಕ ಪರಿಹಾರವಾಗಿದ್ದು ಮೂರನೆಯ ವಲಯದಲ್ಲಿ ಬರುವ ಎತ್ತರದ ಪ್ರದೇಶಗಳಲ್ಲಿ ಸಮಸ್ಯೆಗಳು ಉದ್ಭವಿಸಿರುವುದನ್ನು ಮನಗಂಡು ಕೂಡಲೇ ಅಲ್ಲಿಗೆ ನೀರು ಸರಬರಾಜು ವ್ಯವಸ್ಥೆಯಲ್ಲಿ ಹೆಚ್ಚಿನ ಅಶ್ವಶಕ್ತಿ ಪಂಪುಗಳನ್ನು ಬಳಸಿ ಹಾಗು ನೀರು ಸರಬರಾಜಿನ ಅವಧಿಯನ್ನು ವಿಸ್ತರಿಸುವಂತೆ ತಾಂತ್ರಿಕ ವರ್ಗಕ್ಕೆ ಸೂಚನೆ ನೀಡಿದರು
ಸಮಾಲೋಚನೆಯಲ್ಲಿ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರೀಶ್ ಅಂಚನ್, ಗಿರಿಧರ್ ಆಚಾರ್ಯ, ಭಾರತೀ ಪ್ರಶಾಂತ್, ಯೋಗೀಶ್ ಸಾಲಿಯಾನ್, ಶ್ರೀಕೃಷ್ಣರಾವ್ ಕೊಡಂಚ ಮತ್ತಿತರರು ಭಾಗವಹಿಸಿದ್ದರು.







